Saturday, 14th December 2024

ಕಾಂಗ್ರೆಸ್‌ ವಾರಂಟಿ ಮುಗಿದಿದೆ, ಗ್ಯಾರಂಟಿ ಕೊಡುವ ಪರಿಸ್ಥಿತಿಯಲ್ಲಿಲ್ಲ: ನಮೋ

ಬೆಂಗಳೂರು: ಕಾಂಗ್ರೆಸ್‌ ಅಂದರೆ ಸುಳ್ಳು ಭರವಸೆ, ಕಾಂಗ್ರೆಸ್‌ ಅಂದರೆ ಭ್ರಷ್ಟಾಚಾರ. ಗ್ಯಾರಂಟಿ ಕೊಡುವ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ ಇಲ್ಲ. ಅವರ ವಾರಂಟಿ ಕೂಡ ಮುಗಿದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಗುರುವಾರ ಅವರು ಕರ್ನಾಟಕ ಬಿಜೆಪಿ ಕಾರ್ಯಕರ್ತರೊಂದಿಗೆ ನಡೆಸಿದ ಆನ್‌ಲೈನ್ ಸಭೆಯಲ್ಲಿ ಮಾತನಾಡಿದರು.

ಕಳೆದ 9 ವರ್ಷಗಳಲ್ಲಿ ಭಾರತವು ಜಗತ್ತಿನಾದ್ಯಂತ ಇರುವ ಹೂಡಿಕೆದಾರರಿಗೆ ಪ್ರಮುಖ ತಾಣವಾಗಿ ಮಾರ್ಪಟ್ಟಿದೆ. ಡಬಲ್‌ ಎಂಜಿನ್ ಸರ್ಕಾರದಿಂದಾಗಿ ಕರ್ನಾಟಕಕ್ಕೆ ಹಲವು ಪ್ರಯೋಜನಗಳು ಲಭಿಸಿವೆ ಎಂದು ಹೇಳಿದರು.

‘ಟ್ರ್ಯಾಕ್ಟರ್‌ಗೆ ಮಾರುತಿ ಕಾರಿನ ಚಕ್ರ ಹಾಕಿದರೆ ಅದು ಕೆಲಸ ಮಾಡುತ್ತದೆಯೇ? ಡಬಲ್‌ ಎಂಜಿನ್‌ ಸರ್ಕಾರದಿಂದ ಅಭಿವೃದ್ಧಿ ಸಾಧ್ಯ. ಇಂಥ ಸಣ್ಣ ವಿಚಾರಗಳನ್ನು ಜನರಿಗೆ ತಿಳಿಸಿ, ನೀವು ದೊಡ್ಡ ಭಾಷಣ ಮಾಡುವ ಅಗತ್ಯ ಇಲ್ಲ’ ಎಂದು ಪ್ರಧಾನಿ ಕಾರ್ಯಕರ್ತರೊಂದಿಗೆ ಹೇಳಿದರು.

‘ಹಿಮಾಚಲ ಪ್ರದೇಶದ ಜನರು ತಮಗೆ ಚುನಾವಣೆ ವೇಳೆ ಲಭಿಸಿದ ಗ್ಯಾರಂಟಿಗಾಗಿ ಕಾಯುತ್ತಿದ್ದಾರೆ. ರಾಜಸ್ಥಾನದಲ್ಲಿ ಜನರು ಪ್ರತಿಭಟನೆ ಮಾಡುತ್ತಿದ್ದಾರೆ. ಯಾವುದೇ ಗ್ಯಾರಂಟಿ ನೀಡದ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ ಇದೆ. ಕಾಂಗ್ರೆಸ್‌ ಅಂದರೆ ಭ್ರಷ್ಟಾಚಾರ ಹಾಗೂ ಸುಳ್ಳಿನ ಗ್ಯಾರಂಟಿ. ಅವರ ವ್ಯಾರಂಟಿಯೇ ಮುಗಿದಿರುವಾಗ ಯಾವ ಗ್ಯಾರಂಟಿಯನ್ನು ಕಾಂಗ್ರೆಸ್‌ ನೀಡಲು ಸಾಧ್ಯ?’ ಎಂದು ಪ್ರಶ್ನೆ ಮಾಡಿದ್ದಾರೆ.