Saturday, 26th October 2024

ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಿ.ಎಸ್.ನಾಗಭೂಷಣ ನಿಧನ

ಬೆಂಗಳೂರು: ಹಿರಿಯ ಲೇಖಕ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಿ.ಎಸ್. ನಾಗಭೂ ಷಣ (70)ಅವರು ಗುರುವಾರ ನಿಧನರಾದರು.

ಮೃತರ ಅಂತ್ಯಕ್ರಿಯ ಸಂಜೆ 4 ಗಂಟೆಗೆ ಶಿವಮೊಗ್ಗದ ರೋಟರಿ ಚಿತಾಗಾರದಲ್ಲಿ ನಡೆಯಲಿದೆ. ಅವರಿಗೆ ಪತ್ನಿ, ಕವಯತ್ರಿ ಸವಿತಾ ನಾಗಭೂಷಣ್ ಇದ್ದಾರೆ.

ನಿಷ್ಠುರ ವ್ಯಕ್ತಿ ತತ್ವದ ಡಿಎಸ್ ನಾಗಭೂಷಣ್ ಸಾರ್ವಜನಿಕ ಬದುಕಿನಲ್ಲಿ ತೋರಬೇಕಾದ ಬದ್ದತೆ, ಪ್ರಾಮಾಣಿಕತೆಗೆ ಮಾದರಿಯಾಗಿದ್ದರು. ಸಾಹಿತ್ಯ, ಸಂಸ್ಕೃತಿ, ಕಲೆ, ರಾಜಕೀಯದ ಕುರಿತು ಅಪಾರವಾದ ತಿಳವಳಿಕೆ, ಪಾಂಡಿತ್ಯ ಹೊಂದಿದ್ದ ನಾಗಭೂಷಣ್ ಸಮಕಾಲೀನ ವಿದ್ಯಮಾನಗಳಿಗೆ ಪ್ರತಿಕ್ರಿಯಿ ಸುತ್ತಿದ್ದ ರೀತಿ ವಿಶಿಷ್ಟವಾಗಿತ್ತು.

ಲೋಹಿಯಾರ ವಿಚಾರಧಾರೆಗಳಿಂದ ಪ್ರಭಾವಿತರಾಗಿದ್ದ ಅವರು ಈಚೀನ ವರ್ಷಗಳಲ್ಲಿ ಗಾಂಧೀವಾದದ ಕಡೆ ಹೆಚ್ಚು ಒಲವು ತೋರಿದ್ದರು. ಜಾಗತೀ ಕರಣ ತಂದಿರುವ ವಿಸ್ಮೃತಿಗಳನ್ನು ಎದುರಿಸಲು ಗಾಂಧೀ ಪ್ರತಿಪಾದಿಸಿದ ಸರಳ, ಸಭ್ಯ, ಕಡಿಮೆ ಅವಶ್ಯಕತೆಗಳ ಬದುಕು ನಮ್ಮದಾಗಬೇಕು ಎಂದು ಬಯಸಿ ದ್ದರು.

ಪ್ರತಿವರ್ಷ ಅಕ್ಟೋಬರ್ ನಲ್ಲಿ ಲೋಹಿಯಾ ಪ್ರತಿಷ್ಠಾನದ ಮೂಲಕ ಕುಪ್ಪಳ್ಳಿಯಲ್ಲಿ ಅವರು ಆಯೋಜಿಸುತ್ತಿದ್ದ ಸಮಾಜವಾದಿ ಅಧ್ಯಯನ ಶಿಬಿರದ ಮೂಲಕ ಯುವಜನರಲ್ಲಿ ಗಾಂಧಿ, ಲೋಹಿಯಾ. ಅಂಬೇಡ್ಕರ್, ಜೆ.ಪಿ. ಚಿಂತನೆಯನ್ನು ತಲುಪಿಸಲು ಉತ್ಸುಕರಾಗಿದ್ದರು.

ನಮ್ಮ ನಡುವಿನ ಹಿರಿಯ ಲೇಖಕ, ಚಿಂತಕ, ಹೋರಾಟಗಾರ ಡಿ.ಎಸ್.ನಾಗಭೂಷಣ್ ಅವರ ನಿಧನಕ್ಕೆ ವಿಪಕ್ಷ ನಾಯಕರಾದ ಸಿದ್ದರಾಮಯ್ಯ ಶೋಕ ವ್ಯಕ್ತಪಡಿಸಿದ್ದಾರೆ.

ಡಿ.ಎಸ್.ನಾಗಭೂಷಣ್ ಅವರ ‘ಗಾಂಧಿ ಕಥನ’ ವನ್ನು‌ ಪ್ರೀತಿಯಿಂದ ಕಳಿಸಿಕೊಟ್ಟಿದ್ದರು. ಅದನ್ನು ಓದುತ್ತಿದ್ದೇನೆ ಎಂದಾಗ ಖುಷಿಪಟ್ಟಿದ್ದರು.ಲೋಹಿಯಾ ಚಿಂತನೆಯ‌ ಪುಸ್ತಕಗಳೂ ಸೇರಿದಂತೆ ಅವರ ಎಲ್ಲ ಕೃತಿಗಳ ಮೂಲಕ ನಾಗಭೂಷಣ್ ನಮ್ಮ ನೆನಪಲ್ಲಿ‌ ಸದಾ ಹಸಿರಾಗಿರುತ್ತಾರೆ ಎಂದು ಹೇಳಿದ್ದಾರೆ.