Thursday, 12th December 2024

ದಿವ್ಯಾಂಗರ ಉಚಿತ ಸಮೂಹಿಕ ವಿವಾಹ: ನಾರಾಯಣ ಸೇವಾ ಸಂಸ್ಥಾನದಿಂದ ಶೀಘ್ರದಲ್ಲೇ ಪ್ರಕ್ರಿಯೆ ಆರಂಭ

ಬೆಂಗಳೂರು: ಸುಮಾರು ನಾಲ್ಕು ದಶಕಗಳಿಂದ ದಿವ್ಯಾಂಗರ ಶ್ರೇಯೋಭಿವೃದ್ಧಿಗಾಗಿ ತನ್ನನ್ನು ಸಮರ್ಪಿಸಿಕೊಂಡಿರುವ ರಾಜಸ್ಥಾನದ ನಾರಾಯಣ ಸೇವಾ ಸಂಸ್ಥಾನ ಬರುವ ಫೆಬ್ರವರಿಯಲ್ಲಿ ದಿವ್ಯಾಂಗರಿಗಾಗಿ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಿದೆ.
ಪೊಲೀಯೋ, ಅಪಘಾತ ಮತ್ತಿತರ ಕಾರಣಗಳಿಂದ ದೈಹಿಕವಾಗಿ ನ್ಯೂನತೆಗೆ ಒಳಗಾಗಿರುವ 270 ಕ್ಕೂ ಅಧಿಕ ದಿವ್ಯಾಂಗರಿಗೆ ಬುಲ್‌ ಟೆಂಪಲ್‌ ರಸ್ತೆಯ ಮರಾಠ ಹಾಸ್ಟಲ್‌ ಆವರಣದಲ್ಲಿ ಉಚಿತವಾಗಿ ಕೃತಕ ಅಂಗಾಂಗ ಜೋಡಣೆ ಮಾಡಿತು. ಕರ್ನಾಟಕದಲ್ಲಿ ಈಗಾಗಲೇ ಒಂದು ಸಾವಿರ ಮಂದಿಗೆ ಉಚಿತ ಅಂಗಾಂಗ ಜೋಡಣೆ ಮಾಡಿದ್ದು, ದಿವ್ಯಾಂಗರಿಗಾಗಿ ಮತ್ತಷ್ಟು ಸೇವೆ ಸಲ್ಲಿಸಲು ಉಚಿತ ವಿವಾಹ, ಕೌಶಲ್ಯ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊ ಳ್ಳಲು ನಿರ್ಧರಿಸಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ನಾರಾಯಣ ಸೇವಾ ಸಂಸ್ಥಾನದ ಬೆಂಗಳೂರು ಶಾಖೆ ಅಧ್ಯಕ್ಷ ವಿನೋದ್ ಜೈನ್, ದಿವ್ಯಾಂಗ ವಲಯದಲ್ಲಿ ಕರ್ನಾಟಕ ದಲ್ಲಿ ಮತ್ತಷ್ಟು ಸೇವೆ ಸಲ್ಲಿಸಲು ತೀರ್ಮಾನಿಸಿದ್ದು, ಬರುವ ಫೆಬ್ರವರಿಯಲ್ಲಿ ದಿವ್ಯಾಂಗರ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಏರ್ಪಡಿಸಲು ನಿರ್ಧರಿಸಿದೆ. ರಾಜಸ್ಥಾನದಲ್ಲಿ ಈಗಾಗಲೇ ಸಾಮೂಹಿಕ ವಿವಾಹ ನಡೆಸುತ್ತಿದ್ದು, ಈ ಬಾರಿ ಕನಿಷ್ಠ 50 ಜೋಡಿಗಳಿಗೆ ವಿವಾಹ ಮಾಡಲು ನಿರ್ಧರಿಸ ಲಾಗಿದೆ. ಈ ಸಂಖ್ಯೆ 100 ಗಡಿ ತಲುಪಬಹುದು. ಸಂಸ್ಥೆ ಈಗಾಗಲೇ ಅಂಧರ ಕ್ರಿಕೆಟ್‌, ಈಜು, ವಿದೇಶಗಳಲ್ಲಿ ದಿವ್ಯಾಂಗರಿಗಾಗಿ ಪ್ಯಾಷನ್‌ ಶೋ ಏರ್ಪಡಿಸ ಲಾಗುತ್ತಿದೆ. ಇಲ್ಲಿ ಎಲ್ಲಾ ಜಾತಿ, ಧರ್ಮದವರಿಗೆ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.
ಇಂದು ಅಳವಡಿಸಿದ ಮಾಡ್ಯುಲರ್ ಕೃತಕ ಅಂಗಗಳು ಜರ್ಮನ್ ತಂತ್ರಜ್ಞಾನ ಆಧಾರಿತವಾಗಿದ್ದು, ತೂಕದಲ್ಲಿ ಕಡಿಮೆ ಮತ್ತು ಹೆಚ್ಚಿನ ಗುಣಮಟ್ಟ ಹೊಂದಿವೆ. ದೀರ್ಘ ಬಾಳಿಕೆ ಬರುತ್ತವೆ. ನಾರಾಯಣ ಸೇವಾ ಸಂಸ್ಥಾನ ಇದುವರೆಗೆ 39 ಸಾವಿರಕ್ಕೂ ಹೆಚ್ಚು ಅಂಗವಿಕಲರಿಗೆ ಕೃತಕ ಕೈ ಮತ್ತು ಕಾಲು ಗಳನ್ನು ಸಂಪೂರ್ಣವಾಗಿ ಉಚಿತವಾಗಿ ಅಳವಡಿಸಿದೆ. ಮೂರು ಲಕ್ಷಕ್ಕೂ ಅಧಿಕ ಮಂದಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಕೌಶಲ್ಯ ತರಬೇತಿ ನೀಡಲಾ ಗಿದೆ. ಸುಮಾರು ಮೂರು ಲಕ್ಷ ವೀಲ್‌ ಚೇರ್‌, ಬೈಸಿಕಲ್‌ ಗಳನ್ನು ವಿತರಿಸಲಾಗಿದೆ ಎಂದರು.
ಮರಾಠ ಹಾಸ್ಟಲ್ ಆವರಣದಲ್ಲಿ 10 ವರ್ಷದ ಮಗುವಿನಿಂದ ಹಿಡಿದು 70 ವರ್ಷದ ಹಿರಿಯ ನಾಗರಿಕರವರೆಗೆ ಯಶಸ್ವಿಯಾಗಿ ಅಂಗಾಂಗ ಜೋಡಿಸ ಲಾಯಿತು. ಇದೇ ಸಂದರ್ಭದಲ್ಲಿ ಪ್ರಾಸ್ಥೆಟಿಕ್ ಧರಿಸಿ ನಡೆಯಲು ತರಬೇತಿ ನೀಡಲಾಯಿತು. ಅಂಗವಿಕಲರು ತಮ್ಮ ನಡಿಗೆಯನ್ನು ಸುಧಾರಿಸಲು ಸಾಧ್ಯ ವಾಗುವ ಕನ್ನಡಿಯನ್ನು ಸಹ ಅಳವಡಿಸಲಾಗಿತ್ತು. ಪರಿಣಿತ ವೈದ್ಯರು ಹೊಸದಾಗಿ ಅಂಗಾಂಗ ಜೋಡಣೆ ಮಾಡಿಕೊಂಡವರಿಗೆ ಸುಗಮವಾಗಿ ನಡೆಯಲು ಅನುಕೂಲವಾಗುವಂತೆ ಸೂಕ್ತ ಮಾರ್ಗದರ್ಶನ ಮಾಡಿದರು. ಕೃತಕ ಅಂಗಾಂಗ ಅಳವಡಿಸಿಕೊಂಡವರು ಸಂತಸದಿಂದ ಮರು ಜನ್ಮ ಪಡೆದವರಂತೆ ಸಂಭ್ರಮಿಸಿದರು. ಕೆಲವರು ತಜ್ಞರ ಮಾರ್ಗದರ್ಶನದಲ್ಲಿ ಫುಟ್ಬಾಲ್‌ ಆಡಿ ಹೊಸ ಜೀವನೋತ್ಸಾಹ ತುಂಬಿಕೊಂಡರು.
ಕಾರ್ಯ್ರಕ್ರಮದಲ್ಲಿ ಬಿಪಿನ್ ರಾಮ್ ಜಿ ಅಗರ್ವಾಲ್, ಜನರಲ್‌ ಮೋಟಾರ್ಸ್‌ ನ ಅಮಿತ್‌, ರಮೇಶ್ ಸಂಖ್ಲಾ ಜಿ, ಡಾ. ಉತಮ್ ಜಿ ಖಿಚಾ ಮತ್ತಿತರರು ಉಪಸ್ಥಿತರಿದ್ದರು.