Thursday, 21st November 2024

ಇಸ್ರೋ ಅಧ್ಯಕ್ಷ ಸೋಮನಾಥ್, ಮಾಜಿ ಪಿಎಂ ದೇವೇಗೌಡರಿಗೆ ಡಾಕ್ಟರೇಟ್ ಪ್ರದಾನ

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋದ ಅಧ್ಯಕ್ಷ ಎಸ್.ಸೋಮನಾಥ್ ಮತ್ತು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ಬೆಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿಗೆ ಭಾಜನರಾಗಿದ್ದಾರೆ.

ಬೆಂಗಳೂರು ವಿವಿ ಆಡಳಿತ ಮಂಡಳಿಯ ಆಯ್ಕೆ ಶಿಫಾರಸ್ಸಿಗೆ ವಿವಿ ಕುಲಾಧಿಪತಿಗಳಾದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಒಪ್ಪಿಗೆ ನೀಡಿದ್ದು, ವಿಶ್ವವಿದ್ಯಾಲಯದ ಘಟಿಕೋತ್ಸವ ಕಾರ್ಯಕ್ರಮದ ಸಂದರ್ಭದಲ್ಲಿ ಇಬ್ಬರೂ ಗಣ್ಯರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುತ್ತದೆ.

29 ರಂದು ವಿಶ್ವವಿದ್ಯಾಲಯದ ಘಟಿಕೋತ್ಸವ ಕಾರ್ಯಕ್ರಮ ಆಯೋಜಿಸಲು ದಿನಾಂಕ ನಿಗದಿ ಮಾಡಲಾಗಿತ್ತು. ಆದರೆ, ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಬಂದ್ ಮಾಡುತ್ತಿರುವುದರಿಂದ ಕಾರ್ಯಕ್ರಮ ಮುಂದೂಡಲಾಗಿದೆ.

ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೋ ಅಧ್ಯಕ್ಷ ಸೋಮನಾಥ ಮಾಡಿದ ಅಪೂರ್ವ ಸಾಧನೆ ಮತ್ತು ರೈತನ ಮಗನಾಗಿ ಮಾಜಿ ಪ್ರಧಾನಿ ದೇವೇಗೌಡರು ಅತ್ಯುನ್ನತ ಸ್ಥಾನಕ್ಕೇರಿ ನಾಡಿಗೆ ಸಲ್ಲಿಸಿದ ಸೇವೆ ಪರಿಗಣಿಸಿ ಬೆಂಗಳೂರು ವಿವಿ ಗೌರವ ಡಾಕ್ಟರೇಟ್ ಪದವಿಗೆ ಆಯ್ಕೆ ಮಾಡಿದೆ.

ಕಳೆದ ಜುಲೈ ತಿಂಗಳಲ್ಲಿ ಕುವೆಂಪು ವಿಶ್ವವಿದ್ಯಾಲಯದಲ್ಲಿ ನಡೆದ 33ನೇ ವರ್ಷದ ಘಟಿಕೋತ್ಸವ ಸಂಭ್ರಮದಲ್ಲಿ ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್ ನೀಡಿ, 141 ವಿದ್ಯಾರ್ಥಿಗಳಿಗೆ ಸ್ವರ್ಣ ಪದಕ ವಿತರಿಸ ಲಾಗಿತ್ತು.

ಜುಲೈನಲ್ಲಿಯೇ ರೈತಪರ ಹೋರಾಟಗಾರ ಹಾಗೂ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಿಗೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಇರುವಕ್ಕಿ ಗ್ರಾಮದ ಕೃಷಿ ಮತ್ತು ತೋಟಗಾರಿಕೆ ವಿಶ್ವ ವಿದ್ಯಾಲಯ ಆವರಣದಲ್ಲಿ ನಡೆದ ಸುಗ್ಗಿ ಸಂಭ್ರಮ-8 (ಘಟಿಕೋತ್ಸವ) ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ವಿವಿಯ ಪರವಾಗಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದ್ದರು.