Saturday, 14th December 2024

ಡಾ. ಸಿ. ಎನ್. ಮಂಜುನಾಥ್ ನಿವೃತ್ತಿ

ಬೆಂಗಳೂರು: ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಸಿ. ಎನ್. ಮಂಜುನಾಥ್ ನಿವೃತ್ತರಾಗಿದ್ದಾರೆ.
ನಿರ್ದೇಶಕ ಹುದ್ದೆಗೆ 15ಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿದ್ದು, ಸರ್ಕಾರ ನೇಮಕದ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಿದೆ.
ಡಾ.ಸಿ. ಎನ್. ಮಂಜುನಾಥ್ 2007ರಿಂದ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು. 2023ರ ಜುಲೈನಲ್ಲಿಯೇ ಅವರ ಸೇವಾವಧಿ ಮುಕ್ತಾಯಗೊಂಡಿತ್ತು. ಆಸ್ಪತ್ರೆಯ ಸಿಬ್ಬಂದಿ ಮತ್ತು ಹಲವಾರು ಗಣ್ಯರು ಅವರ ಸೇವೆ ವಿಸ್ತರಣೆ ಮಾಡಬೇಕು ಎಂದು ಒತ್ತಾಯಿಸಿದ್ದರು.
ಜಯದೇವ ನಿರ್ದೇಶಕ ಡಾ. ಮಂಜುನಾಥ್ ಅವಧಿ ವಿಸ್ತರಣೆ ಆಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿ ಡಾ. ಸಿ. ಎನ್. ಮಂಜುನಾಥ್ ಅವರ ಸೇವೆಯನ್ನು 2024ರ ಜನವರಿ ತನಕ ವಿಸ್ತರಣೆ ಮಾಡಲು ತೀರ್ಮಾನವನ್ನು ಕೈಗೊಳ್ಳಲಾಗಿತ್ತು.
ಕಲಬುರಗಿಯಲ್ಲಿಯೂ ಮಂಜುನಾಥ್ ಅವರ ಉಸ್ತುವಾರಿಯಲ್ಲಿ 371 ಹಾಸಿಗೆ ಸಾಮರ್ಥ್ಯದ ಜಯದೇವ ಸಂಸ್ಥೆಯ ಶಾಖೆ ನಿರ್ಮಾಣವಾಗುತ್ತಿದ್ದು, ಉದ್ಘಾಟನೆಗೆ ಸಜ್ಜಾಗಿದೆ.
ಈಗ ಹೊಸ ನಿರ್ದೇಶಕರ ನೇಮಕವಾಗಲಿದೆ ಎಂಬ ಮಾಹಿತಿ ಇದೆ. ಈ ಹುದ್ದೆಗಾಗಿ 15 ಅರ್ಜಿಗಳು ಸಲ್ಲಿಕೆಯಾಗಿವೆ.
ಸುಮಾರು 56 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳೊಂದಿಗೆ ಆಸ್ಪತ್ರೆ ತನ್ನ ಸೇವೆಯನ್ನು ಶೀಘ್ರದಲ್ಲೇ ಆರಂಭಿಸಲಿದೆ. ಹಣಕಾಸು ಇಲಾಖೆಯ ಸಹಮತಿಯೂ ಸಿಕ್ಕಿದೆ. ಈ ಜಯದೇವ ಶಾಖೆ ಆಸ್ಪತ್ರೆ ಕಲ್ಯಾಣ ಕರ್ನಾಟಕ ಭಾಗದ ಹೃದ್ರೋಗಿಗಳ ಪಾಲಿಗೆ ಸಂಜೀವಿನಿಯಾಗಿ ಕಾರ್ಯನಿರ್ವಹಿಸಲಿದೆ.
2016ರಲ್ಲಿ ಕಲಬುರಗಿಯಲ್ಲಿ ಜಯದೇವ ಆಸ್ಪತ್ರೆ ಶಾಖೆ ಆರಂಭವಾಯಿತು. ಇದಕ್ಕೂ ಮೊದಲು ಹೃದ್ರೋಗಿಗಳು ಚಿಕಿತ್ಸೆಗೆ ಸೋಲ್ಹಾಪುರ, ಹೈದರಾಬಾದ್ ಅಥವಾ ದೂರದ ಬೆಂಗಳೂರಿಗೆ ತೆರಳಬೇಕಿತ್ತು. ಈಗ ಜಯದೇವ ಆಸ್ಪತ್ರೆ ಸ್ವಂತ ಕಟ್ಟಡ ನಿರ್ಮಾಣಗೊಂಡಿದ್ದು, ಶೀಘ್ರವೇ ಲೋಕಾರ್ಪಣೆಗೊಳ್ಳಲಿದೆ.