ಬೆಂಗಳೂರು: ಬೆಂಗಳೂರಿನ ಸುತ್ತಲಿನ ಹಾಗೂ ರಾಜ್ಯದ ರೈತರು ಕಾತರದಿಂದ ಕಾಯುತ್ತಿರುವ ಹೆಬ್ಬಾಳದ ಜಿಕೆವಿಕೆಯಲ್ಲಿ ‘ಕೃಷಿ ಮೇಳ’ ನಾಳೆ ನ.17ರಿಂದ 20ರವರೆಗೆ ನಡೆಯಲಿದೆ.
ಈ ಭಾರಿ ಆಹಾರ-ಆರೋಗ್ಯ-ಆದಾಯಕ್ಕಾಗಿ ಸಿರಿಧಾನ್ಯಗಳು’ ಎಂಬ ಘೋಷವಾಕ್ಯದಡಿ ಅದ್ಧೂರಿಯಾಗಿ ಕೃಷಿ ಮೇಳಕ್ಕೆ ಚಾಲನೆ ದೊರೆಯಲಿದೆ.
ಈ ಕೃಷಿ ಮೇಳದಲ್ಲಿ ಗಾಂಧಿ ಕೃಷಿ ವಿಜ್ಞಾನ ಕೇಂದ್ರ, ಬೆಂಗಳೂರು (ಜಿಕೆವಿಕೆ) ಈ ಐದು ಹೊಸ ತಳಿಗಳನ್ನು ಬಿಡುಗಡೆ ಮಾಡಲಿದೆ. ಜತೆಗೆ ಕೃಷಿಯಲ್ಲಿ ಸಾಧನೆ ಮಾಡಿದ ತಾಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದ ಸಾಧಕರನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್.ವಿ.ಸುರೇಶ ಮಾಹಿತಿ ನೀಡಿದರು.
ನ.17ರಂದು ಬೆಳಗ್ಗೆ 11ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಕೆವಿಕೆ ಆವರಣದಲ್ಲಿ ಕೃಷಿ ಮೇಳವನ್ನು ಉದ್ಘಾಟಿಸಲಿದ್ದಾರೆ.
ಲಕ್ಷಾಂತರ ಜನರು, ರೈತರು ಆಗಮಿಸಲಿದ್ದಾರೆ. ಕೃಷಿ ಮೇಳದಲ್ಲಿ ಕ್ಷೇತ್ರ ಸಂದರ್ಶನ, ತಜ್ಞರೊಂದಿಗೆ ಚರ್ಚೆ, ವಸ್ತು ಪ್ರದರ್ಶನಗಳನ್ನು ಕೃಷಿ ಮೇಳವು ಒಳಗೊಂಡಿರಲಿದೆ. ವಸ್ತು ಪ್ರದರ್ಶನದಲ್ಲಿ 625 ಮಳಿಗೆಗಳು ಇರಲಿವೆ. ರೈತರು ಇಲ್ಲಿ ಅಗತ್ಯ ಮಾಹಿತಿ, ಕೃಷಿ ಕುರಿತು ಸಲಹೆಗಳನ್ನು ಪಡೆದುಕೊಳ್ಳಬಹು ದಾಗಿದೆ ಎಂದರು.
ಮುಖ್ಯವಾಗಿ ಅಧಿಕ ಇಳುವರಿಯ ತಳಿಗಳು ಮೇಳದಲ್ಲಿ ಬಿಡುಗಡೆ ಆಗಲಿವೆ. ಕಡಿಮೆ ಅವಧಿಯಲ್ಲಿ ಹೆಚ್ಚು ಇಳುವರಿ ನೀಡುವ ಎಂಎಲ್-322 ರಾಗಿ ತಳಿ, ಜಿಪಿಯುಎಲ್-11ಸಾಮೆ, ಜಿಪಿಯುಪಿ-32 ಬರಗು, ಕೆಬಿಎಸ್‌ಎಚ್-85 ಸೂರ್ಯಕಾಂತಿ ಹಾಗೂ ಹಾಗೂ ಪ್ರಕಟಣೆ ಜಿಕೆವಿಕೆ, ಕೆಂಪು ಹಲಸಿನ ನೂತನ ತಳಿಗಳನ್ನು ಲೋಕಾರ್ಪಣೆ ಆಗಲಿವೆ.
ಮೇಳದಲ್ಲಿ ಸಮಗ್ರ ಬೇಸಾಯ ಪದ್ಧತಿ, ಬೆಳೆ ಪದ್ಧತಿ, ಹನಿ ಮತ್ತು ತುಂತುರು ನೀರಾವರಿ, ಸುಧಾರಿತ ಕೃಷಿ ಯಂತ್ರೋಪಕರಣಗಳ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.