Friday, 22nd November 2024

ಇಂದಿನಿಂದ 21ರ ತನಕ ಹೈಕೋರ್ಟ್‌’ಗೆ ದಸರಾ ರಜೆ

karnataka high court news muda scam

ಬೆಂಗಳೂರು: ಕರ್ನಾಟಕ ಹೈಕೋರ್ಟ್‌ನ ದಸರಾ ರಜೆ ವೇಳಾಪಟ್ಟಿ ಬಿಡುಗಡೆಯಾಗಿದೆ. ಅಕ್ಟೋಬರ್ 16ರ ಸೋಮವಾರದಿಂದ 21ರ ತನಕ ದಸರಾ ರಜೆ ಇರಲಿದೆ. ಈ ಅವಧಿಯಲ್ಲಿ ರಜಾಕಾಲೀನ ಪೀಠ ತುರ್ತು ಅರ್ಜಿಗಳ ವಿಚಾರಣೆಯನ್ನು ಮಾತ್ರ ನಡೆಸಲಿದೆ.

ಹೈಕೋರ್ಟ್‌ನ ನ್ಯಾಯಿಕ ರಿಜಿಸ್ಟ್ರಾರ್ ಎಂ. ಚಂದ್ರಶೇಖರ ರೆಡ್ಡಿ ದಸರಾ ರಜೆ ವೇಳಾಪಟ್ಟಿಯನ್ನು ಪ್ರಕಟಣೆ ಮೂಲಕ ನೀಡಿದ್ದಾರೆ.

ಅಕ್ಟೋಬರ್ 16 ರಿಂದ 21ರ ತನಕ ದಸರಾ ಹಿನ್ನಲೆಯಲ್ಲಿ ಹೈಕೋರ್ಟ್‌ಗೆ ರಜೆ ಇರಲಿದೆ ಎಂದು ಹೇಳಿದ್ದಾರೆ. ಈ ಅವಧಿಯಲ್ಲಿ ರಜಾಕಾಲೀನ ಪೀಠಗಳು ಬೆಂಗಳೂರು, ಧಾರವಾಡ ಮತ್ತು ಕಲಬುರಗಿಯಲ್ಲಿ ಕಾರ್ಯ ನಿರ್ವಹಣೆ ಮಾಡಲಿವೆ.

ಬೆಂಗಳೂರಿನ ಹೈಕೋರ್ಟ್‌ ಪೀಠದಲ್ಲಿ ದಸರಾ ರಜೆ ಅವಧಿಯಲ್ಲಿ ನ್ಯಾಯಮೂರ್ತಿ ಬಿ. ಎಂ. ಶ್ಯಾಮ ಪ್ರಸಾದ್ ಮತ್ತು ನ್ಯಾಯಮೂರ್ತಿ ಟಿ. ವೆಂಕಟೇಶ್ ನಾಯ್ಕ್ ಅವರ ನೇತೃತ್ವದ ವಿಭಾಗೀಯ ಪೀಠ ಕಾರ್ಯ ನಿರ್ವಹಣೆ ಮಾಡಲಿದೆ.

ನ್ಯಾಯಮೂರ್ತಿ ಸಿಎಂ ಪೂಣಚ್ಚ ಹಾಗೂ ನ್ಯಾಯಮೂರ್ತಿ ಟಿ. ಜಿ. ಶಿವಶಂಕರೇಗೌಡ ಅವರ ನೇತೃತ್ವದ ಏಕಸದಸ್ಯ ಪೀಠಗಳು ತುರ್ತು ಪ್ರಕರಣಗಳ ವಿಚಾರಣೆಯನ್ನು ಮಾತ್ರ ನಡೆಸಲಿವೆ.

ಧಾರವಾಡ ಪೀಠದಲ್ಲಿ ನ್ಯಾಯಮೂರ್ತಿ ಕೆ. ಎಸ್. ಹೇಮಲೇಖಾ ಮತ್ತು ಅನಿಲ್ ಬಿ ಕಟ್ಟಿ ನೇತೃತ್ವದ ವಿಭಾಗೀಯ ಪೀಠ ಮೊದಲು ಕಾರ್ಯ ನಿರ್ವಹಣೆ ಮಾಡಲಿದೆ. ಬಳಿಕ ಉಭಯ ನ್ಯಾಯಮೂರ್ತಿಗಳು ಪ್ರತ್ಯೇಕವಾಗಿ ಏಕಸದಸ್ಯ ಪೀಠದಲ್ಲಿ ಕುಳಿತು ಪ್ರಕರಣಗಳ ವಿಚಾರಣೆ ನಡೆಸಲಿದ್ದಾರೆ.

ಕಲಬುರಗಿಯ ಹೈಕೋರ್ಟ್‌ ಪೀಠದಲ್ಲಿ ನ್ಯಾಯಮೂರ್ತಿ ಹೆಚ್. ಟಿ. ನರೇಂದ್ರ ಪ್ರಸಾದ್ ಹಾಗೂ ಜಿ. ಬಸವರಾಜ ನೇತೃತ್ವದ ವಿಭಾಗೀಯ ಪೀಠ ಮೊದಲು ಕಾರ್ಯ ನಿರ್ವಹಣೆ ಮಾಡಲಿದೆ. ಬಳಿಕ ಏಕಸದಸ್ಯ ಪೀಠಗಳಾಗಿ ಪ್ರಕರಣಗಳ ವಿಚಾರಣೆಯನ್ನು ನಡೆಸಲಿದ್ದಾರೆ.