Monday, 16th September 2024

Hindu janajagruti samiti: ಸೆ.4ರಂದು ವಿವಿಪುರಂನಲ್ಲಿ ‘ದೇಶ ವಿರೋಧಿ ಷಡ್ಯಂತ್ರ, ಅರ್ಬನ್ ನಕ್ಸಲ್‌ವಾದ’ ವಿಶೇಷ ಕಾರ್ಯಕ್ರಮ

Hindu janajagruti samiti

ಬೆಂಗಳೂರು: ಹಿಂದು ಜನಜಾಗೃತಿ ಸಮಿತಿ (Hindu janajagruti samiti) ವತಿಯಿಂದ ಸೆ.4ರಂದು ಸಂಜೆ 6 ಗಂಟೆಗೆ ‘ದೇಶ ವಿರೋಧಿ ಷಡ್ಯಂತ್ರ ಮತ್ತು ಅರ್ಬನ್ ನಕ್ಸಲ್ ವಾದ’ ವಿಶೇಷ ಕಾರ್ಯಕ್ರಮವನ್ನು ನಗರದ ವಿವಿಪುರಂನ ವಾಸವಿ ದೇವಸ್ಥಾನ ರಸ್ತೆಯ ಮಾನಂದಿ ನಂಜುಂಡ ಸೆಟ್ಟಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಈ ಬಗ್ಗೆ ಹಿಂದು ಜನಜಾಗೃತಿ ಸಮಿತಿ ರಾಜ್ಯ ವಕ್ತಾರ ಮೋಹನ್ ಗೌಡ ಅವರು ಮಾಹಿತಿ ನೀಡಿದ್ದು, ದೇಶಕ್ಕೆ ಘಾತಕ ‘ಅರ್ಬನ್ ನಕ್ಸಲರ’ ಮುಖವಾಡ ಬಯಲಿಗೆಳಿಯಲು ಹಿಂದು ಜನಜಾಗೃತಿ ಸಮಿತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಹಿಂದೆ ದೇಶ ಮತ್ತು ಆಡಳಿತಗಳ ವಿರುದ್ಧ ನಕ್ಸಲರು ಬಂಡಾಯವೆದ್ದು ಹೋರಾಟ ನಡೆಸುತ್ತಿದ್ದರು. ಆಗ ನಕ್ಸಲರನ್ನು ಹಿಡಿದು ಅವರನ್ನು ಬಂಧಿಸುವುದು ಸರಕಾರಕ್ಕೆ ಸವಾಲಾಗಿತ್ತು. ಆದರೆ ಈಗ ಅಂತಹ ಶಸ್ತ್ರಾಸ್ತ್ರಧಾರಿ ನಕ್ಸಲರಿಗಿಂತ ‘ನಗರ ನಕ್ಸಲ’ರ ಹಾವಳಿ ಹೆಚ್ಚಾಗಿದೆ. ಒಂದು ಸಮುದಾಯ, ವ್ಯವಸ್ಥೆಯನ್ನು ಗುರಿಯಾಗಿಸಿ ವೈಚಾರಿಕ ಸ್ತರದಲ್ಲಿ ನಿರಂತರ ಟೀಕೆ ಟಿಪ್ಪಣಿಗಳನ್ನು ಮಾಡಿ ಆ ಸಮುದಾಯದ ಬಗ್ಗೆ ಸಮಾಜದಲ್ಲಿ ವಿಷಬೀಜ ಬಿತ್ತುವುದೇ ಈ ನಗರ ನಕ್ಸಲರ ಷಡ್ಯಂತ್ರವಾಗಿದೆ ಎಂದು ಆರೋಪಿಸಿದ್ದಾರೆ.

ಭಾರತದ ಏಳಿಗೆ ಮತ್ತು ಸುರಕ್ಷತೆ ದೃಷ್ಟಿಯಿಂದ ಇಂತಹ ನಗರ ನಕ್ಸಲರ ಬೆಳವಣಿಗೆ ಅತ್ಯಂತ ಅಪಾಯಕಾರಿಯಾಗಿದೆ. ಕಳೆದ ಕೆಲವು ವರ್ಷಗಳಿಂದ ಇಂತಹ ನಗರ ನಕ್ಸಲರಿಂದಾಗಿಯೇ ದೇಶದಲ್ಲಿ ಅರಾಜಕತೆ, ಗಲಭೆಯಂತಹ ಅದೆಷ್ಟೋ ಘಟನೆಗಳು ನಡೆಯುತ್ತಿರುವುದು ನಾವು ನೋಡುತ್ತಿದ್ದೇವೆ. ಜಾತ್ಯತೀತತೆಯ ಹೆಸರಿನಲ್ಲಿ ದ್ವೇಷ ಬಿತ್ತುವುದೇ ಇವರ ನಿತ್ಯಕರ್ಮವಾಗಿದೆ. ಪುಸ್ತಕ, ಟಿವಿ-ಚಾನೆಲ್, ಸೋಶಿಯಲ್ ಮೀಡಿಯಾ, ಕಾರ್ಯಕ್ರಮಗಳ ವೇದಿಕೆಗಳೇ ಇವರ ಮಾಧ್ಯಮಗಳಾಗಿವೆ. ಹಾಗಾಗಿ ಈ ನಕ್ಸಲ್ ವಾದವನ್ನು ತಡೆಯಲು ಮತ್ತು ಇದಕ್ಕೆ ತಕ್ಕ ಉಪಾಯವೇನೆಂಬುದರ ದಿಶೆ ನೀಡಲು ಹಿಂದು ಜನಜಾಗೃತಿ ಸಮಿತಿಯು, ‘ದೇಶ ವಿರೋಧಿ ಷಡ್ಯಂತ್ರ ಮತ್ತು ಅರ್ಬನ್ ನಕ್ಸಲ್ ವಾದ’ ಈ ವಿಶೇಷ ಕಾರ್ಯಕ್ರಮದ ಆಯೋಜನೆ ಮಾಡಿದೆ. ಈ ಕಾರ್ಯಕ್ರಮದಲ್ಲಿ ಖ್ಯಾತ ವಿಚಾರಕರು ಮತ್ತು ಲೇಖಕರಾದ ಎಸ್. ಆರ್. ಲೀಲಾ ಮತ್ತು ಯುವ ಬ್ರಿಗೇಡ್ ಸಂಸ್ಥಾಪಕರಾದ ಚಕ್ರವರ್ತಿ ಸೂಲಿಬೆಲೆ ಅವರ ವಿಚಾರಮಂಥನವಾಗಲಿದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *