– ಕನ್ನಡಿಗರು ಇತರರನ್ನು ಗೌರವಿಸಬೇಕು – ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ
ಬೆಂಗಳೂರು: ಬಹುಭಾಷಿಕ ವಾತಾವರಣದಲ್ಲಿ ಎಂದೆಂದಿಗೂ ಕನ್ನಡ ಮರೆಯಬಾರದು. ಕನ್ನಡವೇ ನಮ್ಮ ಸಾರ್ವಭೌಮ ಭಾಷೆಯಾಗಿರಬೇಕು. ಕನ್ನಡಿಗರು ಇತರರನ್ನು ಗೌರವಿಸಬೇಕು ಎಂದು ಲೋಕಾ ಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಹೇಳಿದ್ದಾರೆ.
ನಗರದ ಪುರಭವನದಲ್ಲಿ ಜಯಕರ್ನಾಟಕ ಸಂಘಟನೆಯಿಂದ ಕುವೆಂಪು ಜನ್ಮ ದಿನದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಕರ್ನಾಟಕ ಸುವರ್ಣ ಮಹೋ ತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಏನಾದರೂ ಆಗು ಮೊದಲು ಮಾನವನಾಗು ಎಂಬ ಕವಿ ವಾಣಿ ನಮ್ಮ ನಾಣ್ಣುಡಿಯಾಗಬೇಕು. ಹುಟ್ಟುವಾಗ ಅಷ್ಟೇ ಅಲ್ಲದೇ ಸಾಯುವಾಗಲೂ ಅಪ್ಪಟ ಕನ್ನಡಿಗರಾಗಿರಬೇಕು. ಕನ್ನಡ ಅತ್ಯಂತ ಶ್ರೀಮಂತ ಭಾಷೆ. ಭಾಷೆಯ ಹಿರಿಮೆ, ಗರಿಮೆಯನ್ನು ಪ್ರತಿಯೊಬ್ಬರೂ ಎತ್ತಿ ಹಿಡಿಯಬೇಕು ಎಂದರು.
ಭ್ರಷ್ಟಾಚಾರದ ವಿರುದ್ಧ ಜನ ಸಾಮಾನ್ಯರಲ್ಲಿ ಅರಿವು ಮೂಡಿಸಬೇಕು. ಸಮಾಜದಲ್ಲಿನ ಅನ್ಯಾಯದ ಬಗ್ಗೆ ಹೋರಾಟ ಮಾಡುವ ಮನೋಭಾವನೆ ಯನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು. ಈ ಹಿಂದೆ ಭ್ರಷ್ಟಾಚಾರ ಸಮಾಜಕ್ಕೆ ಅಂಟಿದ ಶಾಪವಾಗಿತ್ತು. ಇದೀಗ ಭ್ರಷ್ಟರನ್ನು ವೈಭವೀಕರಿಸುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ವಿಷಾದ ವ್ಯಕ್ತಪಡಿಸಿದರು.
ವಿಧಾನಪರಿಷತ್ ಸದಸ್ಯ ಡಾ.ಟಿ.ಎ. ಶರವಣ ಮಾತನಾಡಿ, ಕನ್ನಡದ ನೆಲ, ಜಲ, ಭಾಷೆಗೆ ಧಕ್ಕೆ ಬಂದಾಗ ನಾವು ಸುಮ್ಮನೆ ಕೂರುವುದಿಲ್ಲ. ಜೆಡಿಎಸ್ ರಾಜ್ಯದ ಅಸ್ಮಿತೆಯನ್ನು ಕಾಪಾಡಲು ಸದಾ ಸಿದ್ಧವಾಗಿರುತ್ತದೆ. ಕಳೆದ ಎರಡು ಮೂರು ದಿನಗಳಿಂದ ರಾಜ್ಯದಲ್ಲಿ ನಡೆಯುತ್ತಿರುವ ಘಟನೆಗಳು ಖಂಡ ನೀಯ. ಕನ್ನಡಪರ ಹೋರಾಟಗಾರರಿಗೆ ನ್ಯಾಯ ದೊರಕಿಸಿಕೊಡಲು ಎಲ್ಲರು ಮುಂದಾಗಬೇಕು ಎಂದು ಹೇಳಿದರು.
ಜಯಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಡಾ. ಬಿ.ಎನ್. ಜಗದೀಶ್ ಮಾತನಾಡಿ, ಕನ್ನಡಪರ ಸಂಘಟನೆಗಳು ನಾಡು, ನುಡಿ, ಜಲದ ವಿಚಾರದಲ್ಲಿ ರಾಜೀಯಾಗುವುದಿಲ್ಲ. ಕರವೇ ಅಧ್ಯಕ್ಷ ಟಿ.ಎ. ನಾರಾಯಣಗೌಡರ ಬಂಧನ ವಿರೋಧಿಸಿ ನಾವು ಸಂಘಟಿತರಾಗಿ ಹೋರಾಟ ಮಾಡುತ್ತೇವೆ. ಸರ್ಕಾರ ಕನ್ನಡಪರ ಹೋರಾಟಗಾರರ ಮೇಲೆ ದ್ವೇಷದ ನಿಲುವು ತಳೆಯುವುದು ಸರಿಯಲ್ಲ ಎಂದರು.
ಬೆಂಗಳೂರು ನಗರ ಘಟಕದ ಅಧ್ಯಕ್ಷ ಬಿ.ಎನ್. ಯೋಗಾನಂದ್ ಮಾತನಾಡಿ, ಜಯ ಕರ್ನಾಟಕ ಸಂಘಟನೆ ಅಸ್ಥಿತ್ವಕ್ಕೆ ಬಂದು 15 ವರ್ಷಗಳು ಕಳೆದಿದ್ದು, ಹಲವು ಹೋರಾಟಗಳಲ್ಲಿ ಮಂಚೂಣಿಯಲ್ಲಿ ನಿಂತು ಕೆಲಸ ಮಾಡಿದೆ. ಸಂಘಟನೆಯ ಆಶೋತ್ತರಗಳನ್ನು ಈಡೇರಿಸಲು ನಾವು ಕಂಕಣಬದ್ಧರಾಗಿರುವು ದಾಗಿ ಹೇಳಿದರು.