Thursday, 19th September 2024

75ನೇ ವರ್ಷದ ಸಂಭ್ರಮದಲ್ಲಿ ’ಜಯನಗರ’ ಬಡಾವಣೆ

ಬೆಂಗಳೂರು: ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಯೊಂದು 75ನೇ ವರ್ಷದ ಸಂಭ್ರಮದಲ್ಲಿದೆ. ಒಂದು ಕಾಲದಲ್ಲಿ ದಕ್ಷಿಣ ಬೆಂಗಳೂರಿನ ತುತ್ತ ತುದಿ ಎನಿಸಿದ್ದ ಜಯನಗರ ಇದೀಗ ಅನೇಕ ಬಡಾವಣೆಗಳಿಂದ ಹತ್ತಾರು ಕಿ.ಮೀ. ವ್ಯಾಪ್ತಿಸಿದೆ.

ಒಂದು ಕಾಲದಲ್ಲಿ ಕಾಡುಮೇಡುಗಳಿಂದ ಸುತ್ತುವರಿದು, ಕೆರೆಕುಂಟೆಗಳಿಂದ ಆವೃತವಾಗಿದ್ದ ಭೂಪ್ರದೇಶ, ನಂತರದ ದಿನಗಳಲ್ಲಿ ಜನವಸತಿ ನೆಲೆಗೊಂಡು ಜೀವನೋಪಾಯಕ್ಕೆ ಹೊಲಗದ್ದೆಗಳಾಗಿ ಮಾರ್ಪಾಡಾಯಿತು. ರೈತಾಪಿ ವರ್ಗಕ್ಕೆ ನೆಲೆ ಕಲ್ಪಿಸುವ ಮೂಲಕ ಹಸಿರ ಸಮೃದ್ಧಿಯ ತಾಣವಾಗಿತ್ತು.

ಕಣ್ಣು ಹಾಯಿಸಿದಲ್ಲೆಲ್ಲಾ ರಾಗಿ, ಭತ್ತ, ಶೇಂಗ, ತರಕಾರಿ, ಹೂವುಗಳ ಹೊಲಗಳೇ ಕಾಣುತ್ತಿತ್ತು. ಹತ್ತಾರು ಎಕರೆ ಪ್ರದೇಶಗಳಲ್ಲಿ ಸೀಬೆ (ಚೇಪೆ) ಕಾಯಿ ತೋಟ ಮೈದಳೆದಿತ್ತು. ನೂರಾರು ಎಕರೆಯಲ್ಲಿ ಹಣ್ಣು-ತರಕಾರಿ ಬೆಳೆದ ರೈತರು ಜೀವನ ಸಾಗಿಸುತ್ತಿದ್ದರು.

ಅಂದಿನ ಅರೇ ಕೆಂಪನಹಳ್ಳಿ (ಇಂದಿನ ಸೋಮೇಶ್ವರ ನಗರ), ಸಿದ್ದಾಪುರದ ಕೆಲವು ಭಾಗ. ಕನಕನಪಾಳ್ಯ, ಬೈರ ಸಂದ್ರ (ಇಂದಿನ ತಿಲಕ್‌ ನಗರ), ಗುರಪ್ಪನಪಾಳ್ಯ (ಶಿವಬಾಲ ಯೋಗಿ ಆಶ್ರಮ), ತಾಯಪ್ಪನ ಪಾಳ್ಯ (ಇಂದಿನ ಜಯನಗರ ಟಿ ಬ್ಲಾಕ್‌), ಟಾಟಾ ಸಿಲ್ಕ್ ಫಾರ್ಮ್, ಶ್ರೀ ಪಟ್ಟಾಭಿರಾಮ ನಗರ, ಸಾಕಮ್ಮ ಗಾರ್ಡನ್‌, ಯಡಿಯೂರು ಕೆರೆ ಸೇರಿ ಹತ್ತು ಹಲವು ಪ್ರದೇಶಗಳನ್ನು ಒಳಗೊಂಡಿದ್ದು ಒಂದು ಕಾಲದಲ್ಲಿ ಈ ಭೂಭಾಗಗಳು ರೈತರ ಹೊಲ ಗದ್ದೆಗಳಾಗಿದ್ದವು.

ಆಧುನಿಕತೆಯ ಸ್ಪರ್ಶದೊಂದಿಗೆ ಎಲ್ಲರೂ ನಿಬ್ಬೆರಗಾಗುವಂತೆ ಬೆಳೆದಿರುವ “ಜಯನಗರ’, ಏಷ್ಯಾದಲ್ಲೇ ಅತ್ಯಂತ ಯೋಜಿತ ದೊಡ್ಡ ಬಡಾವಣೆ ಎಂಬ ಕೀರ್ತಿಯನ್ನೂ ಪಡೆದಿದೆ.

ಬೆಂಗಳೂರಿನ ಜಯನಗರ ಬಡಾವಣೆಗೂ ಮೈಸೂರು ಮಹಾಸಂಸ್ಥಾನಕ್ಕೂ ಸಹಜ ನಂಟಿದೆ. ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ನಿಧನದ ನಂತರ ಜಯಚಾಮರಾಜೇಂದ್ರ ಒಡೆಯರ್‌ ಪಟ್ಟಕ್ಕೇರಿದರು. ತಾವು ಪಟ್ಟಕ್ಕೇರಿದ 8 ವರ್ಷದ ನೆನಪಿಗಾಗಿ 1948ರಲ್ಲಿ ಬೆಂಗಳೂರಿನಲ್ಲೊಂದು ಯೋಜಿತ ಬಡಾವಣೆ ನಿರ್ಮಿಸಲು ಚಿಂತಿಸಿದರು.

ಅದನ್ನು ಕಾರ್ಯರೂಪಕ್ಕೆ ತರಲು ಸಿಟಿ ಇಂಪ್ರೂವ್‌ಮೆಂಟ್‌ ಟ್ರಸ್ಟ್‌ ಬೋರ್ಡ್‌ ಸ್ಥಾಪಿಸಿ ಅದಕ್ಕೆ ಸಿ.ನರಸಿಂಗರಾವ್‌ರನ್ನು ಅಧ್ಯಕ್ಷರನ್ನಾಗಿ ಮಾಡಿದರು. ಜತೆಗೆ ಆರ್‌.ಮಾಧವನ್‌ ಮುಖ್ಯ ಎಂಜಿನಿಯರ್‌ ಆಗಿದ್ದರು. ಇಡೀ ಬಡಾವಣೆಯ ಕೆಲಸಕ್ಕೆ ಅಧಿಕೃತ ಗುತ್ತಿಗೆದಾರರಾಗಿ ಕೆ.ಇ.ರಂಗನಾಥಾಚಾರ್‌ರನ್ನು ನೇಮಿಸಲಾಯಿತು. ಮೈಸೂರು ಅರಸರ ಕನಸಿನ ಕೂಸಾದ ಈ ಬಡಾವಣೆಗೆ ಜಯನಗರ ಬಡಾವಣೆ ಎಂದೇ ನಾಮಕರಣ ಮಾಡಲಾಯಿತು.