Thursday, 21st November 2024

ಜೆಡಿಎಸ್ ಶಾಸಕ ಎ.ಟಿ.ರಾಮಸ್ವಾಮಿ ಶಾಸಕ ಸ್ಥಾನಕ್ಕೆ ರಾಜೀನಾಮೆ

ಬೆಂಗಳೂರು: ಹಾಸನ ಜಿಲ್ಲೆಯ ಅರಕಲಗೂಡು ಕ್ಷೇತ್ರದ ಜೆಡಿಎಸ್ ಶಾಸಕ ಎ. ಟಿ. ರಾಮಸ್ವಾಮಿ ಶುಕ್ರವಾರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ವಿಧಾನಸಭೆಯ ಕಾರ್ಯದರ್ಶಿಗೆ ರಾಜೀನಾಮೆ ಪತ್ರವನ್ನು ಅವರು ಸಲ್ಲಿಕೆ ಮಾಡಿ, ವಿಧಾನಸೌಧದ ಮೆಟ್ಟಿಲಿಗೆ ನಮಸ್ಕಾರ ಮಾಡಿ ತೆರಳಿದರು.

 

2018ರ ಚುನಾವಣೆಯಲ್ಲಿ ಎ. ಟಿ. ರಾಮಸ್ವಾಮಿ 85,064 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. 74,411 ಮತಗಳನ್ನು ಪಡೆದ ಕಾಂಗ್ರೆಸ್‌ನ ಎ. ಮಂಜು ಸೋಲಿಸಿದ್ದರು. ಎ. ಮಂಜು ಜೆಡಿಎಸ್‌ ಸೇರಿದ್ದಾರೆ. ಅರಕಲಗೂಡು ಕ್ಷೇತ್ರಕ್ಕೆ ಈ ಬಾರಿಯ ಚುನಾವಣೆಗೆ ಅವರೇ ಜೆಡಿಎಸ್ ಅಭ್ಯರ್ಥಿ. ಕ್ಷೇತ್ರದ ಹಾಲಿ ಶಾಸಕ ಎ. ಟಿ. ರಾಮಸ್ವಾಮಿ ಕಾಂಗ್ರೆಸ್ ಸೇರಲಿದ್ದು, ಕಾಂಗ್ರೆಸ್ ಟಿಕೆಟ್ ಪಡೆಯುವ ಸಾಧ್ಯತೆ ಇದೆ.

ಅರಕಲಗೂಡು ಕ್ಷೇತ್ರದಲ್ಲಿ ಎ. ಟಿ. ರಾಮಸ್ವಾಮಿಯನ್ನು ಬಿಟ್ಟು ಎ. ಮಂಜು ನೇತೃತ್ವದಲ್ಲಿ ಜೆಡಿಎಸ್‌ ಪಕ್ಷದ ಪಂಚರತ್ನ ರಥಯಾತ್ರೆ ನಡೆದಿತ್ತು. ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕೆಲವೇ ದಿನಗಳಲ್ಲಿ ಅವರು ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ.

ಮಂಗಳವಾರ ಗುಬ್ಬಿ ಕ್ಷೇತ್ರದ ಜೆಡಿಎಸ್ ಶಾಸಕ ಎಸ್. ಆರ್. ಶ್ರೀನಿವಾಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಗುರುವಾರ ಕಾಂಗ್ರೆಸ್ ಪಕ್ಷವನ್ನು ಸೇರಿದ್ದಾರೆ. ಬಿಜೆಪಿ, ಜೆಡಿಎಸ್ ಬಿಟ್ಟು ಬಂದ ಹಲವು ನಾಯಕರಿಗೆ ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ಟಿಕೆಟ್ ನೀಡಿದೆ.