Sunday, 1st December 2024

ಜನವರಿ 23ರಿಂದ ಬಜೆಟ್​ ಪೂರ್ವಭಾವಿ ಸಭೆ, ಫೆಬ್ರವರಿ 17ರಂದು ಬಜೆಟ್

ಬೆಂಗಳೂರು: ಕೆಲ ದಿನಗಳಲ್ಲಿ ರಾಜ್ಯ ಬಜೆಟ್ ಮಂಡನೆಯಾಗಲಿದೆ. ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳ, ಸಾಮಾನ್ಯ ಜನರ ನಿರೀಕ್ಷೆ, ಕುತೂಹಲ ಬಜೆಟ್ ಮೇಲೆ ಹೆಚ್ಚಾಗಿದೆ. ಇದೇ ಜನವರಿ 23 ಸೋಮವಾರದಿಂದ ಸಿಎಂ ನೇತೃತ್ವದಲ್ಲಿ ಬಜೆಟ್​ ಪೂರ್ವಭಾವಿ ಸಭೆ ನಡೆಯಲಿದೆ.
ಎಲ್ಲಾ ಇಲಾಖೆಗಳ ಸಚಿವರು, ಅಧಿಕಾರಿಗಳ ಜೊತೆ ಸಿಎಂ ಬಸವರಾಜ ಬೊಮ್ಮಾಯಿಯವರು ಬಜೆಟ್ ಪೂರ್ವಭಾವಿ ಸಭೆ ನಡೆಸಲಿದ್ದಾರೆ. ನಾಡಿದ್ದು 23ರಿಂದ 3 ದಿನ ಬಜೆಟ್ ಪೂರ್ವಭಾವಿ ಸಭೆ ನಿಗದಿಯಾಗಿದ್ದು 30ಕ್ಕೂ ಹೆಚ್ಚು ಇಲಾಖೆಗಳ ಜೊತೆ ಚರ್ಚಿಸಿ ಫೆಬ್ರವರಿ 17ರಂದು ಬಜೆಟ್ ಮಂಡಿಸಲು ಸಿಎಂ ಬೊಮ್ಮಾಯಿ ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಇಲಾಖೆಗಳೊಂದಿಗೆ ಸಿಎಂ ಸಭೆ: ಸಭೆಗೆ ನಿಗದಿತ ದಿನ ಹಾಗೂ ಸಮಯದಲ್ಲಿ ಆಯಾ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳು ಅವಶ್ಯಕ ಮಾಹಿತಿಗಳು ಹಾಗೂ ಪ್ರಾತ್ಯಕ್ಷಿಕೆಯೊಂದಿಗೆ ಹಾಜರಾಗಲು ಆರ್ಥಿಕ ಇಲಾಖೆ ಸೂಚಿಸಿದೆ.