Sunday, 15th December 2024

ವಿಮಾನ ನಿಲ್ದಾಣದ ಒಳಗಡೆ ಪ್ರವೇಶಕ್ಕೆ ಯತ್ನ: ಪ್ರತಿಭಟನಾಕಾರರು ವಶಕ್ಕೆ

ಬೆಂಗಳೂರು: ಕರ್ನಾಟಕ ಬಂದ್ ಹಿನ್ನೆಲೆ ಕೆಂಪೇಗೌಡ ವಿಮಾನ ನಿಲ್ದಾಣದ ಒಳಗಡೆ ಪ್ರವೇಶಿಸಿ ವಿಮಾನ ತಡೆದು ಪ್ರತಿಭಟನೆ ನಡೆಸಲು ಮುಂದಾಗಿದ್ದವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಿಮಾನ ಟಿಕೆಟ್ ಬುಕ್ ಮಾಡಿ ನಮ್ಮ ಕರ್ನಾಟಕ ಸೇನೆಯ ಐವರು ಕಾರ್ಯಕರ್ತರು, ವಿಮಾನ ನಿಲ್ದಾಣದ ಒಳಗಡೆ ಪ್ರವೇಶಿಸಿದ್ದಾರೆ. ಬಳಿಕ ಪ್ಲೈಟ್ ಬಳಿ ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಕೂಡಲೇ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ. ಪ್ರತಿಭಟನಾಕಾರರು ವಿಮಾನದ ಟಿಕೆಟ್ ಬುಕ್ ಮಾಡಿದ್ದರು.

ಬೆಂಗಳೂರಿಗೆ ಆಗಮಿಸುವ ಮತ್ತು ನಿರ್ಗಮಿಸುವ ವಿಮಾನಗಳ ಸಂಚಾರದಲ್ಲಿ ಅಡಚಣೆಯಾಗಿದೆ. ದೆಹಲಿ, ಮುಂಬೈ, ಕೊಲ್ಕತ್ತಾ, ಮಂಗಳೂರು ಸೇರಿ ಒಟ್ಟು 41 ವಿಮಾನಗಳ ಹಾರಾಟ ರದ್ದಾಗಿದೆ. ಬೆಂಗಳೂರಿಗೆ ಆಗಮಿಸಬೇಕಿದ್ದ ಹಾಗೂ ಬೆಂಗಳೂರಿನಿಂದ ನಿರ್ಗಮಿಸಬೇಕಿದ್ದ ವಿಮಾನಗಳು ರದ್ದುಗೊಂಡಿವೆ. ಪ್ರಯಾಣಿಕ ರಿಲ್ಲದ ಕಾರಣ 41 ವಿಮಾನಗಳ ಹಾರಾಟ ರದ್ದುಗೊಂಡಿದೆ ಎನ್ನಲಾಗಿದೆ.

ಕರ್ನಾಟಕ ನವ ನಿರ್ಮಾಣ ಸೇನೆ ಕಾರ್ಯಕರ್ತರು ವಿಮಾನ ನಿಲ್ದಾಣಕ್ಕೆ ನುಗ್ಗಿ ಮುತ್ತಿಗೆ ಹಾಕಲು ಯತ್ನಿಸಿ ದ್ದರು. ವಿಮಾನ ನಿಲ್ದಾಣದ ಟರ್ಮಿನಲ್ 1 ನಿರ್ಗಮನ ಗೇಟ್​ನಲ್ಲಿ ಮುತ್ತಿಗೆ ಹಾಕಲು ಯತ್ನಿಸಿದ ಕಾರ್ಯಕರ್ತ ರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮತ್ತೊಂದೆಡೆ ಕನ್ನಡ ಪರ ಸಂಘಟನೆಗಳ ಕಾರ್ಯಕತರು ಹೋರಾಟ ನಡೆಸಿ ವಿಮಾನ ನಿಲ್ದಾಣಕ್ಕೆ ಮುತ್ತಿಗೆ ಹಾಕಿದ್ದಾರೆ. ಅಲ್ಲದೇ ತಮಿಳುನಾಡಿಗೆ ಕಾವೇರಿ ನೀರು ಬಿಡದಂತೆ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದ್ದಾರೆ.

ವಿಮಾನ ನಿಲ್ದಾಣದ ಆಗಮನ ಗೇಟ್ ಬಳಿ ಕರವೆ ಕಾರ್ಯಕರ್ತರ ಕನ್ನಡ ಬಾವುಟಗಳನ್ನ ಕೈಲಿಡಿದು ಘೋಷಣೆಗಳನ್ನು ಹಾಕಿದ್ದಾರೆ. ಈ ವೇಳೆ ಕರವೇ ಕಾರ್ಯ ಕರ್ತರನ್ನ ವಶಕ್ಕೆ ಪಡೆಯಲು ಪೊಲೀಸರು ಹರಸಾಹಸಪಟ್ಟಿದ್ದು, 20 ಕ್ಕೂ ಅಧಿಕ ಕಾರ್ಯಕರ್ತರನ್ನ ವಶಕ್ಕೆ ಪಡೆದಿದ್ದಾರೆ. ಇನ್ನೂ ಕೆಲ ಕಾರ್ಯಕರ್ತರನ್ನು ಏರ್​ಪೋರ್ಟ್​ನ ಹೊರಭಾಗದಲ್ಲೇ ತಡೆದು ವಶಕ್ಕೆ ಪಡೆದಿದ್ದಾರೆ. ಸದ್ಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಬಿಗಿ ಪೊಲೀಸ್​ ಬಂದೋಬಸ್ತ್​ ವ್ಯವಸ್ಥೆ ಮಾಡಲಾಗಿದೆ.