Saturday, 14th December 2024

ಕಾಂಗ್ರೆಸ್​ನ ಅಬ್ಬರಕ್ಕೆ ಲೋಕಸಭಾ ಚುನಾವಣೆಯಲ್ಲಿ ಉತ್ತರ ನೀಡಲಿದ್ದೇವೆ: ಬಿ.ವೈ.ವಿಜಯೇಂದ್ರ

ಬೆಂಗಳೂರು: ಪ್ರತಿಯೊಬ್ಬ ಕಾರ್ಯಕರ್ತನ ರಕ್ತದ ಕಣಕಣದಲ್ಲಿಯೂ ಹೋರಾಟದ ಗುಣವಿದೆ. ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್​ನ ಅಬ್ಬರಕ್ಕೆ ಲೋಕಸಭಾ ಚುನಾವಣೆಯಲ್ಲಿ ಉತ್ತರ ನೀಡಲಿದ್ದೇವೆ ಎಂದು ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಟಕ್ಕರ್ ನೀಡಿ ದ್ದಾರೆ.

ಗಾಂಧಿನಗರ ವಿಧಾನಸಭಾ ಕ್ಷೇತ್ರದ ಬೂತ್ ನಂಬರ್ 40ರ ಬೂತ್ ಅಧ್ಯಕ್ಷ ಶಶಿಧರ್ ನಿವಾಸಕ್ಕೆ ಭೇಟಿ ನೀಡಿದ್ದ ಅವರು, ಶಶಿಧರ್ ಕುಟುಂಬಕ್ಕೆ ದೀಪಾ ವಳಿ ಹಬ್ಬದ ಶುಭಾಶಯ ಕೋರಿದರು. ಬಳಿಕ ಕೆಲಕಾಲ ಮಾತುಕತೆ ನಡೆಸಿದರು.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ಗಾಂಧಿನಗರ ವಿಧಾನಸಭಾ ಕ್ಷೇತ್ರದ ಬೂತ್ ನಂಬರ್ 40ರ ಬೂತ್ ಅಧ್ಯಕ್ಷ ಶಶಿಧರ್ ಮನೆಗೆ ಭೇಟಿ ಕೊಟ್ಟಿ ದ್ದೇನೆ. ರಾಜ್ಯದಲ್ಲಿ ಒಟ್ಟಾರೆಯಾಗಿ 58,282 ಬೂತ್​ಗಳು ಇವೆ. ಎಲ್ಲಾ ಬೂತ್​ಗಳಲ್ಲಿ ಪಕ್ಷದ ಸಂಘಟನೆ ಬಲಪಡಿಸಬೇಕು ಎನ್ನುವ ಸದುದ್ದೇಶದಿಂದ ಶಶಿಧರ್ ನಿವಾಸಕ್ಕೆ ಭೇಟಿ ನೀಡಿದ್ದೇನೆ. ಕೇಂದ್ರದ ನಾಯಕರಾದ ಅಮಿತ್ ಶಾ, ಜೆಪಿ ನಡ್ದಾ ಅವರಂತೆ ಬೂತ್ ಗೆದ್ದರೆ ದೇಶ ಗೆಲ್ಲುತ್ತೇವೆ ಎನ್ನುವ ಅಭಿಪ್ರಾಯ ಹೊಂದಿದ್ದೇವೆ. ಇದು ನಮ್ಮ ರಾಷ್ಟ್ರೀಯ ಅಧ್ಯಕ್ಷರ ಕಲ್ಪನೆಯಾಗಿದೆ. ಹಾಗಾಗಿ, ಗಾಂಧಿನಗರ ಬೂತ್ ಅಧ್ಯಕ್ಷರ ಮನೆಗೆ ಭೇಟಿ ಕೊಡುವ ಮೂಲಕ ಇಡೀ ರಾಜ್ಯದಲ್ಲಿರುವ ಎಲ್ಲಾ ಬೂತ್​ಗಳಲ್ಲಿ ನಮ್ಮ ಪಕ್ಷದ ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಚರ್ಚೆ ಆರಂಭಿಸಿದ್ದೇನೆ ಎಂದು ತಿಳಿಸಿದರು.

ಬಿಜೆಪಿಯ ಕಾರ್ಯಕರ್ತರು ಎಂದಿಗೂ ಕೂಡ ಹೋರಾಟದಿಂದ ಹಿಂದೆ ಸರಿದ ಉದಾಹರಣೆಗಳಿಲ್ಲ. ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತನ ಪ್ರತಿ ಯೊಂದು ರಕ್ತದ ಕಣಕಣದಲ್ಲಿಯೂ ಹೋರಾಟದ ಗುಣಗಳಿವೆ, ಹೆದರಿಕೊಂಡು ಓಡಿ ಹೋಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ನ ಅಬ್ಬರಕ್ಕೆ ತಕ್ಕ ಉತ್ತರ ನೀಡಲಿದ್ದೇವೆ ಎಂದು ತಿಳಿಸಿದರು. ಈ ಬಳಿಕ ಕೇಶವಕೃಪಾದಲ್ಲಿರುವ ಕಚೇರಿಗೆ ಭೇಟಿ ನೀಡಿ ಆರ್​ಎಸ್​ಎಸ್​ ನಾಯಕರ ಜೊತೆ ಮಾತುಕತೆ ನಡೆಸಿದರು.