Thursday, 19th September 2024

Mandya violence: ನಾಗಮಂಗಲ ಗಲಭೆ ಖಂಡಿಸಿ ನಾಳೆ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ

Mandya violence

ಬೆಂಗಳೂರು: ನಾಗಮಂಗಲ ಗಲಭೆ ಖಂಡಿಸಿ ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿಯಿಂದ ಸೆ.13ರಂದು ಬೆಳಗ್ಗೆ 10:45ಕ್ಕೆ ನಗರದ ಟೌಲ್‌ ಎದುರು ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣಪತಿ ವಿಸರ್ಜನೆ ಸಂದರ್ಭದಲ್ಲಿ ನಡೆದ ಗಣೇಶೋತ್ಸವದ ಮೇಲೆ ಕಿಡಿಗೇಡಿಗಳ ಯೋಜಿತ ದಾಳಿಯನ್ನು ಖಂಡಿಸಿ, ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗುತ್ತಿದೆ. ಸಮಗ್ರ ತನಿಖೆಗಾಗಿ ಪ್ರಕರಣವನ್ನು ಎನ್‌ಐಎಗೆ ವಹಿಸಬೇಕು ಎಂದು ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿ ಪದಾಧಿಕಾರಿಗಳು ತಿಳಿಸಿದೆ.

ಏನಿದು ಘಟನೆ?

ಗಣೇಶೋತ್ಸವ ವಿಸರ್ಜನಾ ಮೆರವಣಿಗೆ ವೇಳೆ ಅನ್ಯಕೋಮಿನ ಯುವಕರು ಕಲ್ಲು ತೂರಾಟ ನಡೆಸಿ ಪೆಟ್ರೋಲ್‌ ಬಾಂಬ್‌ ಎಸೆದು ದಾಂಧಲೆ ನಡೆಸಿದ್ದರಿಂದ ನಾಗಮಂಗಲ(Nagamangala) ದ ಬದರಿಕೊಪ್ಪಲಿನಲ್ಲಿಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಬುಧವಾರ ಸಂಜೆ ಅದ್ಧೂರಿ ಗಣಪತಿ ವಿಸರ್ಜನಾ ಮೆರವಣಿಗೆ ನಡೆಸುವ ವೇಳೆ ಈ ಘಟನೆ ನಡೆದಿದೆ. ನಾಗಮಂಗಲದ ಮೈಸೂರು ರಸ್ತೆ(Mysore road)ಯಲ್ಲಿರುವ ದರ್ಗಾ ಬಳಿ ಮೆರವಣಿಗೆ ಬಂದ ವೇಳೆ ಅನ್ಯಕೋಮಿನ ಯುವಕರು ಕಲ್ಲುತೂರಾಟ ನಡೆಸಿದ್ದರು. ಈ ವೇಳೆ ಹಿಂದು-ಮುಸ್ಲಿಂ ಯುವಕರ ನಡುವೆ ವಾಕ್ಸಮರ, ತಳ್ಳಾಟ ನೂಕಾಟ ನಡೆದಿತ್ತು. ಬಳಿಕ ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರು ಹರಸಾಹಸ ನಡೆಸಿದ್ದಾರೆ.

ಇನ್ನು ದುಷ್ಕರ್ಮಿಗಳ ಗುಂಪು ಅಂಗಡಿ, ಅಂಗಡಿ ಮುಂದಿದ್ದ ಬೈಕ್‌ಗಳಿಗೆ ಬೆಂಕಿ ಹಚ್ಚಿದ್ದರು. ಅಷ್ಟೇ ಅಲ್ಲದೆ ರಸ್ತೆ ಮಧ್ಯೆ ಕತ್ತಿ ಹಿಡಿದು ಝಳಪಿಸಿದ್ದರ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಸುಮಾರು 46 ಮಂದಿಯನ್ನುಅರೆಸ್ಟ್‌ ಮಾಡಿದ್ದಾರೆ. ಪ್ರಸ್ತುತ ಪ್ರದೇಶದಲ್ಲಿ 144ಸೆಕ್ಷನ್‌ ಜಾರಿಯಾಗಿದೆ. ಮುಂಜಾಗ್ರತಾ ಕ್ರಮವಾಗಿ ನಾಗಮಂಗಲದ ಶಾಲಾ, ಕಾಲೇಜುಗಳಿಗೆ ಗುರುವಾರ ರಜೆ ಘೊಷಿಸಲಾಗಿದೆ.

ಮಂಡ್ಯ ಗಲಭೆ ಖಂಡಿಸಿ ಎಲ್ಲ ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ

ಮಂಡ್ಯ: ನಾಗಮಂಗಲ(Nagamangala)ದ ಬದರಿಕೊಪ್ಪಲಿನಲ್ಲಿ ಗಣೇಶೋತ್ಸವ ವಿಸರ್ಜನಾ ಮೆರವಣಿಗೆ ವೇಳೆ ಬುಧವಾರ ರಾತ್ರಿ ಅನ್ಯಕೋಮಿನ ಯುವಕರು ಕಲ್ಲು ತೂರಾಟ ನಡೆಸಿ, ಪೆಟ್ರೋಲ್‌ ಬಾಂಬ್‌ ಎಸೆದು ದಾಂಧಲೆ ನಡೆಸಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಘಟನೆಯನ್ನು ಹಿಂದೂ ಜಾಗರಣ ವೇದಿಕೆ ಖಂಡಿಸಿದ್ದು, ಇಂದು (ಸೆಪ್ಟೆಂಬರ್‌ 12) ಸಂಜೆ ಎಲ್ಲಾ ಜಿಲ್ಲಾ ಕೇಂದ್ರ, ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲು ಕರೆ ನೀಡಿದೆ (Mandya Violence).

ಹಿಂದೂ ಜಾಗರಣ ವೇದಿಕೆಯ ಮುಖಂಡರಾದ ದೋ ಕೇಶವಮೂರ್ತಿ ಈ ಬಗ್ಗೆ ಮಾಹಿತಿ ನೀಡಿ, ʼʼಮಂಡ್ಯ ಜಿಲ್ಲೆಯ ನಾಗಮಂಗಲದ ಬದರಿ ಕೊಪ್ಪಲುವಿನಲ್ಲಿ ಗಣಪತಿ ವಿಸರ್ಜನೆ ಸಂದರ್ಭದಲ್ಲಿ ನಡೆದ ಗಲಭೆ ಖಂಡನಾರ್ಹ. ಆರೋಪಿಗಳ ಬಂಧನ ಮತ್ತು ಪ್ರಕರಣದ ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿ ಇಂದು ಸಂಜೆ ಎಲ್ಲಾ ಜಿಲ್ಲಾ ಕೇಂದ್ರ, ತಾಲೂಕು ಕೇಂದ್ರಗಳಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಒಕ್ಕೂಟದ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆʼʼ ಎಂದು ತಿಳಿಸಿದ್ದಾರೆ.