Thursday, 12th December 2024

ಮೈಚಾಂಗ್ ಚಂಡಮಾರುತ ತೀವ್ರ: ಡಿ.10ರವರೆಗೆ ಮತ್ತಷ್ಟು ಚಳಿ

ಬೆಂಗಳೂರು: ರಾಜಧಾನಿ ಬೆಂಗಳೂರಿಗೆ ‘ಮೈಚಾಂಗ್’ ಚಂಡಮಾರುತದ ಪ್ರಭಾವ ಉಂಟಾಗಿದೆ. ಮಳೆಯ ಕೊರತೆ ಕಂಡಿದ್ದ ನಗರದಲ್ಲಿ ಮಳೆ ಜೊತೆಗೆ ತಂಪಿನ ವಾತಾವರಣ ಕಂಡು ಬಂದಿದೆ.

ತಾಪಮಾನವು ಇಳಿಕೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಚಳಿಗಾಲ ಆರಂಭವಾದರೂ ಸಹಿತ ಬೆಂಗಳೂರು ಪ್ರತಿ ವರ್ಷ ದಂತೆ ಈ ವರ್ಷ ಇಲ್ಲ. ಕೆಲವು ದಿನಗಳಿಂದ ಚಳಿಯೂ ಅಲ್ಲದ, ಅಧಿಕ ಬಿಸಿಲು ಬೀಳದೆ ಮತ್ತು ನಿರೀಕ್ಷಿತ ಮಳೆ ಆಗದೇ ಇರುವ ವಾತಾವರಣ ಉಂಟಾಗಿತ್ತು.

ಬಂಗಾಳಕೊಲ್ಲಿ-ಅಂಡಮಾನ್ ಸಮುದ್ರ ಭಾಗದಲ್ಲಿ ಉಂಟಾಗಿರುವ ಮೈಚಾಂಗ್ ಚಂಡಮಾರುತ ಪ್ರಭಾವದಿಂದಾಗಿ ಬೆಂಗಳೂರಿನ ವಾತಾವರಣ ಬದಲಾಗಿದೆ. ಮೈಚಾಂಗ್ ಇಂದು ತೀವ್ರ ಸ್ವರೂಪ ಪಡೆದುಕೊಂಡು ನೆರೆಯ ರಾಜ್ಯಗಳಾದ ತಮಿಳುನಾಡು, ಆಂಧ್ರ ಪ್ರದೇಶ ಮತ್ತು ಓಡಿಶಾ ಕರಾವಳಿಗೆ ಅಪ್ಪಳಿಸುವ ಮುನ್ಸೂಚನೆ ಇದೆ.

ಚಂಡಮಾರುತ ಪ್ರಭಾವದಿಂದಾಗಿ ಬೆಂಗಳೂರಿನಲ್ಲಿ ಮಂಗಳವಾರದವರೆಗೆ ಇದೇ ವಾತಾವರಣ ಮುಂದುವರಿಯಲಿದೆ. ಕೆಲವೆಡೆ ಸೋನೆ ಮಳೆ ಬರಲಿದೆ. ನಂತರದ ಡಿಸೆಂಬರ್ 10ರವರೆಗೆ ಮತ್ತಷ್ಟು ಚಳಿಯ ವಾತಾವರಣ ಸೃಷ್ಟಿಯಾಗಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ನೀಡಿದೆ.

ನಗರದಲ್ಲಿ ಡಿ.7ರವರೆಗೆ ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಂಡು ಬರಲಿದೆ. ನಂತರ ಡಿ.10ರವರೆಗೆ 17ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆ ಆಗಲಿದೆ. ಈ ವೇಳೆ ಗರಿಷ್ಠ ತಾಪಮಾನ 28-29ರಷ್ಟು ಇರಲಿದೆ ಎಂದು ತಿಳಿಸಿದೆ.