Thursday, 12th December 2024

ಮೈಶುಗರ್ ಕಾರ್ಖಾನೆಗೆ ಬಾಕಿ 17.42 ಕೋಟಿ ರೂಪಾಯಿ ಶೀಘ್ರವೇ ಬಿಡುಗಡೆ ಮಾಡಿ

ಹಣಕಾಸು ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಶಾಸಕ ದಿನೇಶ್ ಗೂಳಿಗೌಡ ಬೇಟಿ ಮಾಡಿ ಮನವಿ

* ಜೂನ್‌ನಿಂದಲೇ ಮಂಡ್ಯ ಜಿಲ್ಲೆಯಲ್ಲಿ ಕಬ್ಬು ಅರೆಯುವ ಪ್ರಕ್ರಿಯೆ ಆರಂಭ ಹಿನ್ನೆಲೆ ಸೂಕ್ತ ಕ್ರಮ ವಹಿಸಲು ಒತ್ತಾಯ
* ಜಿಲ್ಲೆಯಲ್ಲಿ 6112 ಎಕರೆ ಪ್ರದೇಶದಲ್ಲಿ 305600 ಮೆಟ್ರಿಕ್ ಟನ್ ಕಬ್ಬು ಬೆಳೆದಿರುವ 3395 ರೈತರಿಂದ ನೋಂದಣಿ

ಬೆಂಗಳೂರು: ಮೈಸೂರು ಸಕ್ಕರೆ ಕಾರ್ಖಾನೆಯ ಪುನಶ್ಚೇತನಕ್ಕೆ ಮಂಜೂರಾಗಿರುವ ಹಣದಲ್ಲಿ ಬಾಕಿ ಉಳಿಕೆ ಯಾಗಿರುವ 17.42 ಕೋಟಿ ರೂಪಾಯಿ ಯನ್ನು ಶೀಘ್ರವೇ ಬಿಡುಗಡೆ ಮಾಡಿ ಈ ಭಾಗದ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸ್ಥಳೀಯ ಸಂಸ್ಥೆಗಳ ಮಂಡ್ಯ ಕ್ಷೇತ್ರದ ಶಾಸಕ ದಿನೇಶ್‌ ಗೂಳಿಗೌಡ, ಹಣಕಾಸು ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದು ಕೋರಿದ್ದಾರೆ.

ಬರುವ ಜೂನ್‌ನಿಂದಲೇ ಮಂಡ್ಯ ಜಿಲ್ಲೆಯಲ್ಲಿ ಕಬ್ಬು ಅರೆಯುವ ಪ್ರಕ್ರಿಯೆ ಆರಂಭವಾಗಲಿದೆ. ಇದೇ ವೇಳೆ ಕಾರ್ಖಾನೆಯಲ್ಲಿ ಮುಂಚಿತವಾಗಿ ಹಣದ ಅವಶ್ಯಕತೆ ಇರುತ್ತದೆ. ರೈತರಿಗೆ ಮುಂಗಡ ಪಾವತಿ ಸೇರಿದಂತೆ ಕಬ್ಬು ಅರೆಯುವ ಸಂಬಂಧ ಅನೇಕ ಖರ್ಚು ವೆಚ್ಚಗಳು ಇರುತ್ತವೆ. ಆದರೆ, ಇಂತಹ ಸಂದರ್ಭದಲ್ಲಿ ಬರಬೇಕಾದ ಅನುದಾನವು ಬಿಡುಗಡೆಯಾಗದೇ ಹೋದರೆ ರೈತರಿಗೆ ಬಹಳವೇ ತೊಂದರೆಯಾಗಲಿದೆ. ಹೀಗಾಗಿ ಈ ಅನುದಾನ ವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಶಾಸಕರು ಒತ್ತಾಯಿಸಿದ್ದಾರೆ.

ಅಲ್ಲದೆ, ಜಿಲ್ಲೆಯಲ್ಲಿ 6112 ಎಕರೆ ಪ್ರದೇಶದಲ್ಲಿ 305600 ಮೆಟ್ರಿಕ್ ಟನ್ ಕಬ್ಬು ಬೆಳೆದ 3395 ರೈತರುಗಳು 2023 ಮತ್ತು 24ನೇ ಸಾಲಿಗೆ ಕಬ್ಬು ಸರಬರಾಜು ಮಾಡಲು ಈಗಾಗಲೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಇವರೆಲ್ಲರೂ ಜೂನ್‌ನಿಂದಲೇ ಕಬ್ಬು ಪೂರೈಕೆಯನ್ನು ಪ್ರಾರಂಭಿಸಬಹುದಾಗಿದ್ದು, ಇವರಿಗೆ ಆ ಸಮಯದಲ್ಲಿ ಯಾವುದೇ ತೊಂದರೆಯಾಗದಂತೆ ಹಣದ ಪಾವತಿ ಯಾಗಬೇಕು. ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಬಾಕಿ ಇರುವ ಅನುದಾನ ಬಿಡುಗಡೆಯಾಗಬೇಕಿದೆ ಎಂದು ಶಾಸಕರು ಪತ್ರದ ಮೂಲಕ ಸಮಸ್ಯೆ ಗಳ ಬಗ್ಗೆ ಉಲ್ಲೇಖಿಸಿದ್ದಾರೆ.

ಪತ್ರದಲ್ಲೇನಿದೆ?

ಮಂಡ್ಯ ಜಿಲ್ಲೆಯ ಜನತೆಯ, ರೈತರ ಜೀವನಾಡಿಯಾಗಿರುವ ಮೈಸೂರು ಸಕ್ಕರೆ ಕಾರ್ಖಾನೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಜೂನ್‌ ತಿಂಗಳಿನಲ್ಲೀಯೇ ಕಬ್ಬು ಅರೆಯುವ ಕೆಲಸವನ್ನು ಪ್ರಾರಂಭಿಸುವ ಗುರಿ ಹೊಂದಲಾಗಿದೆ. ಈ ಸಾಲಿನಲ್ಲಿ ಒಟ್ಟಾರೆ ಸುಮಾರು 6 ಲಕ್ಷ ಮೆಟ್ರಿಕ್‌ ಟನ್‌ ಕಬ್ಬು ನುರಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಈ ಫೆಬ್ರವರಿ, ಮಾರ್ಚ್‌ ಎರಡು ತಿಂಗಳಲ್ಲಿ 3 ಲಕ್ಷ ಟನ್‌ ಕಬ್ಬು ಸರಬರಾಜು ಮಾಡುವುದಾಗಿ ರೈತರು ಈಗಾಗಲೇ ಕಾರ್ಖಾನೆ ಯೊಟ್ಟಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಕಾರ್ಖಾನೆಯಲ್ಲಿ ಯಂತ್ರಗಳ ರಿಪೇರಿ, ಹಾಗೂ ಕಬ್ಬು ನುರಿಸುವ ತಯಾರಿ ಕಾರ್ಯಕ್ಕೆ ಹಣಕಾಸಿನ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಈಗ ಸರ್ಕಾರದ ಸಹಕಾರ ಬಹಳ ಮುಖ್ಯವಾಗುತ್ತದೆ.

ಸ್ಥಗಿತಗೊಂಡಿರುವ ಮೈಶುಗರ್ ಕಾರ್ಖಾನೆಯನ್ನು ಪುನಶ್ಚತನಗೊಳಿಸಲು ಸರ್ಕಾರವು ನಿರ್ಧರಿಸಿ, ಮುಂದಿನ ಎರಡು ವರ್ಷಗಳ ಕಾಲ ಪ್ರಾಯೋಗಿಕ ವಾಗಿ ಸರ್ಕಾರದ ವತಿಯಿಂದಲೇ ಕಾರ್ಖಾನೆಯನ್ನು ನಡೆಸಲಾಗುವುದು. ಕಾರ್ಖಾನೆಯ ಯಂತ್ರೋಪಕರಣ ದುರಸ್ತಿಗಾಗಿ 50 ಕೋಟಿ ರೂ.ಗಳನ್ನು ಒದಗಿಸುವುದಲ್ಲದೆ, ಹಣಕಾಸು ಸಂಸ್ಥೆಗಳಿಂದ ದುಡಿಯುವ ಬಂಡವಾಳವನ್ನು ಪಡೆಯಲು ವ್ಯವಸ್ಥೆ ಮಾಡಲಾಗುವುದು ಎಂದು 2022-23 ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಲಾಗಿತ್ತು. ಅದರಂತೆ ಯಂತ್ರೋಪಕರಣಗಳ ದುರಸ್ತಿ ಮತ್ತು ಓವ‌ರ್- ಹಾಲಿಂಗ್ ಕೆಲಸಗಳಿಗೆ, ಸಾಮಾಗ್ರಿ ಖರೀದಿ ಮತ್ತು ಗುತ್ತಿಗೆ ಕೆಲಸಗಳನ್ನು ಕೈಗೊಳ್ಳಲು, ಕಬ್ಬು ಕಟಾವು ಮಾಡುವ ಮೇಸ್ತ್ರಿಗಳಿಗೆ ಮುಂಗಡ ಹಣ ಪಾವತಿಸಲು, ನೌಕರರಿಗೆ ಸ್ವಯಂ ನಿವೃತ್ತಿ ಸೌಲಭ್ಯ ಪಾವತಿಸುವುದಕ್ಕಾಗಿ 32.58 ಕೋಟಿ ರೂ. ಅನುದಾನವನ್ನು ಇದುವರೆಗೆ ಬಿಡುಗಡೆಗೊಳಿಸಲಾಗಿದೆ. ಬಾಕಿ ಉಳಿದಿರುವ 17.42 ಕೋಟಿ ರೂಪಾಯಿಗಳನ್ನು ಬಿಡುಗಡೆಗೊಳಿಸುವ ಕ್ರಮವಹಿಸಲಾಗುತ್ತಿದೆ ಎಂದು ಹೇಳಲಾಗಿತ್ತು.

ಆದ್ದರಿಂದ ಈಗಾಗಲೇ ಸರ್ಕಾರ ನೀಡಿ ಬಜೆಟ್ ನಲ್ಲಿ ಘೋಷಿಸಿದ್ದ 50 ಕೋಟಿ ಹಣದಲ್ಲಿ ಬಾಕಿ ಇರುವ 17.42 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿ ಕೊಡಬೇಕು ಎಂದು ಮಂಡ್ಯ ಜಿಲ್ಲೆಯ ರೈತರ ಹಿತ ದೃಷ್ಟಿಯಿಂದ ಅವರ ಪರವಾಗಿ ಮನವಿ ಮಾಡಿಕೊಳ್ಳುತ್ತೇನೆ ಎಂದು ಶಾಸಕ ದಿನೇಶ್ ಗೂಳಿಗೌಡ ಅವರು ಪತ್ರದ ಮೂಲಕ ಕೋರಿದ್ದಾರೆ.