ಬೆಂಗಳೂರು: ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಲಿಮಿಟೆಡ್ (ಉಜ್ಜೀವನ್ ಎಸ್‌ಎಫ್‌ಬಿ) ಜುಲೈ 1, 2024 ರಿಂದ ಮುಂದಿನ ಮೂರು ವರ್ಷಗಳ ಅವಧಿಗೆ ಶ್ರೀ ಸಂಜೀವ್ ನೌಟಿಯಾಲ್ ಅವರನ್ನು ತನ್ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿ ನೇಮಕ ಮಾಡಲು ಆರ್‌ಬಿಐ ಅನುಮೋದನೆ ನೀಡಿದೆ ಎಂದು ಪ್ರಕಟಿಸಿದೆ.
ಬ್ಯಾಂಕಿನ ಎಂಡಿ ಮತ್ತು ಸಿಇಒ ಆಗಿ ಅಧಿಕಾರ ವಹಿಸಿಕೊಳ್ಳುವುದಕ್ಕೆ ಸಾಕಷ್ಟು ಮುಂಚಿತವಾಗಿಯೇ ಅವರು ಉಜ್ಜೀವನ್ ಬ್ಯಾಂಕಿಗೆ ಸೇರುತ್ತಾರೆ ಮತ್ತು ಈ ಮಧ್ಯಂತರ ಸಮಯದಲ್ಲಿ ಅವರನ್ನು ಪ್ರೆಸಿಡೆಂಟ್ ಎಂದು ನೇಮಕಮಾಡಲಾಗಿದೆ. ನೌಟಿಯಾಲ್ ಅವರು ವಿಶ್ರಾಂತ ಎಸ್‌ಬಿಐನ ಡೆಪ್ಯೂಟಿ ಮ್ಯಾನೇಜಿಂಗ್ ಡೈರೆಕ್ಟರ್, ಮತ್ತು ಈ ಹಿಂದೆ ಎಸ್‌ಬಿಐ ಲೈಫ್‌ನಲ್ಲಿ ಎರಡು ವರ್ಷಗಳ ಕಾಲ ಎಂಡಿ ಮತ್ತು ಸಿಇಒ ಆಗಿ ಕೆಲಸ ಮಾಡಿದ್ದಾರೆ. ಬ್ಯಾಂಕಿಂಗ್ ವೃತ್ತಿಜೀವನದಲ್ಲಿ ಶ್ರೀಯುತರಿಗೆ 36 ವರ್ಷಗಳ ಸುದೀರ್ಘವಾದ ಮತ್ತು ಶ್ರೀಮಂತವಾದ ಅನುಭವವಿದೆ.
ಎಂಡಿ ಮತ್ತು ಸಿಇಒ ಆಗಿ ಶ್ರೀ ನೌಟಿಯಾಲ್ ಅವರ ನೇಮಕಾತಿ, ಬ್ಯಾಂಕಿನ ಮುಂದಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಷೇರುದಾರರ ಅನುಮೋದನೆಗೆ ಒಳಪಟ್ಟಿರುತ್ತದೆ.
ಈ ಸಂದರ್ಭದಲ್ಲಿ ಮಾತನಾಡಿದ ಉಜ್ಜೀವನ್ ಎಸ್‌ಎಫ್‌ಬಿ ಅಧ್ಯಕ್ಷರಾದ ಶ್ರೀ ಬಾಣಾವರ ಅನಂತರಾಮಯ್ಯ ಪ್ರಭಾಕರ್ ಹೀಗೆ ನುಡಿದರು: “ಆರ್‌ಬಿಐ, ಶ್ರೀ ನೌಟಿಯಾಲ್ ಅವರ ನೇಮಕಾತಿಯನ್ನು ಅನುಮೋದಿಸಿರುವುದು ನನಗೆ ಬಹಳ ಸಂತೋಷ ತಂದಿದೆ. ಅವರನ್ನು ಉಜ್ಜೀವನ್ ಕುಟುಂಬಕ್ಕೆ ಸ್ವಾಗತಿಸುತ್ತೇನೆ. ಅವರೊಬ್ಬ ದೇಶೀಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಸರ್ವತೋಮುಖ ಅನುಭವವನ್ನು ಹೊಂದಿರುವ ಮಹತ್ವದ ರೀಟೇಲ್ ಬ್ಯಾಂಕರ್. ಅವರಿಗೆ ಬ್ಯಾಂಕಿಂಗ್ ನ ಎಲ್ಲ ಕ್ಷೇತ್ರಗಳಲ್ಲೂ ಅಪಾರ ಅನುಭವವಿದೆ. ಗ್ರಾಹಕರೇ ಕೇಂದ್ರವಾಗಿರುವಂತಹ, ಬಲವಾದ ಸಂಸ್ಥೆ ಗಳನ್ನು ಕಟ್ಟುವಲ್ಲಿ ಮತ್ತು ಪೋಷಿಸುವಲ್ಲಿ ಪರಿಣತರು. ಅವರ ಈ ಎಲ್ಲ ಅರ್ಹತೆಗಳು ಉಜ್ಜೀವನ್ ಅನ್ನು ಮುನ್ನಡೆಸಲು ಸಹಜ ಆಯ್ಕೆಯನ್ನಾಗಿಸಿವೆ. ನಾವೀನ್ಯತೆ, ಸಹಯೋಗ ಮತ್ತು ಒಟ್ಟಾಗಿ ಕೆಲಸಮಾಡುವ ಬಗ್ಗೆ ಪ್ರೀತಿಯುಳ್ಳ ಅವರ ನಾಯಕತ್ವ ಕೌಶಲ್ಯಗಳು ಉಜ್ಜೀವನ್‌ನ ರೂಢಿಗತ ಮೌಲ್ಯ ಗಳೊಂದಿಗೆ ಹೊಂದಿಕೊಳ್ಳುತ್ತವೆ. ಈ ಪ್ರಯಾಣ, ಅವರಿಗೆ ಶುಭಕರವಾಗಲಿ ಮತ್ತು ಅತ್ಯುತ್ತಮ ಯಶಸ್ಸನ್ನು ತರಲಿ ಎಂದು ನಾನೂ ಮತ್ತು 22,000+ ’ಉಜ್ಜೀವನಿ’ಗಳು ಹಾರೈಸುತ್ತೇವೆ.”
ಎಂಡಿ ಮತ್ತು ಸಿಇಒ ಆಗಿ ಉಜ್ಜೀವನ್ ಎಸ್‌ಎಫ್‌ಬಿ ಕಥೆಗೆ ಒಳ್ಳೆಯ ತಿರುವನ್ನು ನೀಡಿದ ಶ್ರೀ ಇಟ್ಟೀರ ಡೇವಿಸ್ ಅವರಿಗೆ ಶ್ರೀ. ಪ್ರಭಾಕರ್ ಅವರು ಕೃತಜ್ಞತೆಗಳನ್ನು ಸಲ್ಲಿಸಿದರು. ಬದಲಾವಣೆಯನ್ನು ಸುಗಮವಾಗಿಸುವ ಸಲುವಾಗಿ ಶ್ರೀ ಡೇವಿಸ್ ಅವರು ಶ್ರೀ ನೌಟಿಯಾಲ್ ಅವರೊಂದಿಗೆ ಇನ್ನೂ ಕೆಲಸ ಮಾಡುತ್ತಾರೆ. ಡೇವಿಸ್ ಅವರು, ತಮ್ಮ ಮೂಲ ಅವಧಿ ಮುಗಿಯುವ ಕೆಲವು ತಿಂಗಳುಗಳ ಮೊದಲೇ ಸೇವೆಯಿಂದ ಬಿಡುಗಡೆ ಹೊಂದಬೇಕೆಂಬ ಆಶಯವನ್ನು ವ್ಯಕ್ತಪಡಿಸಿದ್ದರು ಮತ್ತು ಮಂಡಳಿಯು ಅವರ ಆಶಯಗಳನ್ನು ಗೌರವಿಸಿದೆ.
ತಮ್ಮ ನೇಮಕಾತಿಯ ಕುರಿತು ಪ್ರತಿಕ್ರಿಯಿಸಿದ ಶ್ರೀ ಸಂಜೀವ್ ನೌಟಿಯಾಲ್: “ಉಜ್ಜೀವನ್‌ಗೆ ಸೇರುತ್ತಿರುವುದು ನಿಜಕ್ಕೂ ಒಂದು ಗೌರವವೇ. ಉಜ್ಜೀವನ್ ಒಂದು ಪ್ರಮುಖ ಸಮೂಹ ಮಾರುಕಟ್ಟೆ ಬ್ಯಾಂಕ್; ಇದು, ಪ್ರತಿಯೊಬ್ಬರಿಗೂ ಉತ್ತಮ ಜೀವನವನ್ನು ಕಟ್ಟಿಕೊಡಬೇಕೆಂಬ ಉನ್ನತವಾದ ಉದ್ದೇಶವನ್ನು ಹೊಂದಿದೆ. ಉಜ್ಜೀವನ್, ಎನ್‌ಬಿಎಫ್‌ಸಿ-ಎಂಎಫ್‌ಐ ನಿಂದ ಒಂದು ಅತ್ಯಂತ ಯಶಸ್ವಿ ಬ್ಯಾಂಕಾಗಿ ಪರಿವರ್ತನೆಗೊಂಡಿದೆ. ಈಗ ಅದು ಹಣಕಾಸು ಮತ್ತು ಡಿಜಿಟಲ್ ಸೇರ್ಪಡೆಯ ಹೊಸ ಗಡಿಗಳನ್ನು ದಾಟಲು ಸಿದ್ಧವಾಗಿದೆ. ಟೀಮ್ ಉಜ್ಜೀವನ್ ಮತ್ತು ಎಲ್ಲ ಹಿತಾಸಕ್ತರೊಂದಿಗೆ ಸೇರಿ ಕೆಲಸ ಮಾಡಲು ಉತ್ಸುಕನಾಗಿದ್ದೇನೆ.”
ಶ್ರೀ ನೌಟಿಯಾಲ್ ಅವರಿಗೆ ರೀಟೇಲ್, ಎಸ್.ಎಂ.ಇ., ಫೈನಾನ್ಷ್ಯಲ್ ಇನ್ಕ್ಲೂಶನ್, ಆಪರೇಷನ್ಸ್, ಎಚ್.ಆರ್., ಇಂಟರ್ನ್ಯಾಷನಲ್ ಬ್ಯಾಂಕಿಂಗ್ ಮತ್ತು ಟ್ರೆಷರಿಗಳಲ್ಲಿ ಮೂರು ದಶಕಗಳ ವ್ಯಾಪಕವಾದ ಮಹತ್ವದ ಡೊಮೇನ್ ಪರಿಣತಿ ಇದೆ. ಅವರು ಈ ಹಿಂದೆ ಉಪ-ವ್ಯವಸ್ಥಾಪಕ ನಿರ್ದೇಶಕರಾಗಿ (ಹಣಕಾಸು ಸೇರ್ಪಡೆ ಮತ್ತು ಮೈಕ್ರೋ ಮಾರ್ಕೆಟ್ಸ್), ಎಸ್‌ಬಿಐ ಮತ್ತು ಎಸ್‌ಬಿಐ ಲೈಫ್ ಇನ್ಶೂರೆನ್ಸ್ ನ ಎಂಡಿ ಮತ್ತು ಸಿಇಒ ಆಗಿ ಅತ್ಯುತ್ತಮವಾಗಿ ಕೆಲಸ ಮಾಡಿದ್ದಾರೆ. ಪ್ರಸ್ತುತ ಅವರು ಭಾರತೀಯ ಜೀವ ವಿಮಾ ನಿಗಮದ (ಎಲ್.ಐ.ಸಿ ಯ) ಸ್ವತಂತ್ರ ನಿರ್ದೇಶಕರಾಗಿದ್ದಾರೆ ಮತ್ತು ಹಲವಾರು ಸಂಸ್ಥೆಗಳಲ್ಲಿ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಶ್ರೀ ನೌಟಿಯಾಲ್ ಅವರು ಆರ್ಟ್ಸ್ ವಿಭಾಗದಲ್ಲಿ ಪದವಿ ಮತ್ತು ವ್ಯವಹಾರ ಆಡಳಿತದಲ್ಲಿ ಸ್ನಾತಕೋತ್ತರ ಪದವಿಯನ್ನು ಗಳಿಸಿದ್ದಾರೆ; ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕರ್‌ಗಳ ಸರ್ಟಿಫೈಡ್ ಅಸೋಸಿಯೇಟ್ ಆಗಿದ್ದಾರೆ.