ಬೆಂಗಳೂರು: ಅಕ್ಟೋಬರ್ನಲ್ಲಿ ನೂತನ ವೇತನ ಆಯೋಗ ರಚಿಸುವೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.
ವಿಧಾನಸೌಧ ಬ್ಯಾಂಕ್ವೆಟ್ ಹಾಲ್ನಲ್ಲಿ ಆಯೋಜಿಸಿದ್ದ ರಾಜ್ಯ ಸರ್ಕಾರಿ ನೌಕರರ ದಿನ ಉದ್ಘಾಟಿಸಿದ ಬಳಿಕ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಮಾಡಿದ ಸಿಎಂ, ವೇತನ ಪರಿಷ್ಕರಣೆಗೆ ಸಂಬಂಧಿಸಿದ ಶಿಫಾರಸು ಹಾಗೂ ವರದಿ ಸಲ್ಲಿಸಲು ಈ ಆಯೋಗ ರಚಿಸಲಿದ್ದು, ನೌಕರರ ಇನ್ನುಳಿದ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನಿಸಲಾಗುವುದು ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು 2025ರ ವೇಳೆಗೆ ಭಾರತ ಐದು ಟ್ರಿಲಿಯನ್ ಆರ್ಥಿಕತೆ ಸಾಧಿಸುವ ಗುರಿ ಇಟ್ಟುಕೊಂಡಿದೆ, ಇದರಲ್ಲಿ ಒಂದು ಟ್ರಿಲಿಯನ್ ಕರ್ನಾಟಕದ ಪಾಲು ಇರಬೇಕು ಎನ್ನುವ ರಾಜ್ಯ ಸರ್ಕಾರದ ಸಂಕಲ್ಪಕ್ಕೆ ಸರ್ಕಾರಿ ನೌಕರರ ಸಹಭಾಗಿತ್ವ ಕೂಡ ಮುಖ್ಯ ಎಂದರು.
ಗೋವು ಸಂಪತ್ತು ಉಳಿಸಿ ಬೆಳೆಸುವ ಉದ್ದೇಶದಿಂದ ಹಸುಗಳನ್ನು ದತ್ತು ಸ್ವೀಕರಿಸುವ ಪುಣ್ಯಕೋಟಿ ಯೋಜನೆಗೆ ಕೈಜೋಡಿಸ ಬೇಕು. ಇದು ಒತ್ತಾಯವಲ್ಲ, ನನ್ನ ಮನವಿ ಎಂದು ಸಿಎಂ ಹೇಳಿದರು.
ಒಂದು ಹಸು ದತ್ತು ಪಡೆಯಲು ವಾರ್ಷಿಕ 11,000 ರೂ. ಶುಲ್ಕ ನಿಗದಿಪಡಿಸಿದ್ದು, ನಾನು 100 ಗೋವುಗಳನ್ನು ದತ್ತು ಸ್ವೀಕರಿಸಲು ನಿರ್ಧರಿಸಿರುವೆ. ಅದೇ ರೀತಿ ಸಚಿವರು, ಸಂಸದರು, ಶಾಸಕರು ಸೇರಿ ಜನಪ್ರತಿನಿಧಿಗಳು ಈ ಯೋಜನೆಗೆ ಸಹಕರಿಸಬೇಕು ಎಂದು ಸಿಎಂ ಸಲಹೆ ನೀಡಿದರು.