Thursday, 12th December 2024

ಕೆರೆಗಳಲ್ಲಿ ಅವೈಜ್ಞಾನಿಕವಾಗಿ ಹೂಳು ಎತ್ತುತ್ತಿರುವ ವಿರುದ್ದ ಕ್ರಮ ಕೈಗೊಳ್ಳಿ: ಸಚಿವ ಎನ್‌ ಎಸ್‌ ಭೋಸರಾಜು ಸೂಚನೆ

ಬೆಂಗಳೂರು: ರಾಜ್ಯದ ಸಣ್ಣ ನೀರಾವರಿ ಇಲಾಖೆಯ ಕೆರೆಗಳಲ್ಲಿ ಹೂಳನ್ನ ಅವೈಜ್ಞಾನಿಕವಾಗಿ ಎತ್ತಲಾಗುತ್ತಿದ್ದು, ಇದರಿಂದ ಕೆರೆಗಳಲ್ಲಿನ ನೀರು ಇಂಗಿ ಹೋಗಿ ನೀರಿನ ಅಭಾವ ಸೃಷ್ಟಿಗೆ ಕಾರಣವಾಗುತ್ತಿದೆ. ಇದನ್ನ ತಡೆಗಟ್ಟುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಮಾನ್ಯ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್‌ ಎಸ್‌ ಬೋಸರಾಜು ಅವರು ಸೂಚನೆ ನೀಡಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನು ನೀಡಿರುವ ಅವರು, ರಾಜ್ಯದ ಸಣ್ಣ ನೀರಾವರಿ ಇಲಾಖೆಯ ಕೆರೆಗಳಲ್ಲಿ ಹೂಳನ್ನ ಎತ್ತುತ್ತಿದ್ದಾರೆ. ಕೆಲವು ಪ್ರಕರಣಗಳಲ್ಲಿ ನಿರ್ದಿಷ್ಟ ಮಿತಿಗಿಂತ ಜಾಸ್ತಿ ಮತ್ತು ಅವೈಜ್ಞಾನಿಕವಾಗಿ ಹೂಳನ್ನ ಎತ್ತುತ್ತಿರುವುದರಿಂದ ಸರಕಾರದ ಬೊಕ್ಕಸಕ್ಕೂ ನಷ್ಟ ಉಂಟಾಗುತ್ತಿದೆ. ಅಲ್ಲದೇ, ಈ ರೀತಿ ಅಸಮರ್ಪಕ ಮತ್ತು ಅವೈಜ್ಞಾನಿಕವಾಗಿ ಹೂಳು ಎತ್ತುತ್ತಿರುವುದರಿಂದ ಕೆರೆಗಳಲ್ಲಿನ ನೀರು ಇಂಗಿಹೋಗಿ ನೀರಿನ ಅಭಾವ ಸೃಷ್ಟಿಯಾಗುತ್ತಿದೆ.

ಅಲ್ಲದೇ, ಅಂತರ್ಜಲ ಮಟ್ಟವೂ ಗಣನೀಯವಾಗಿ ಕ್ಷೀಣಿಸುತ್ತಿದೆ. ಈ ಹಿನ್ನಲೆಯಲ್ಲಿ ಇಂತಹ ಚಟುವಟಿಕೆಗಳ ವಿರುದ್ದ ಕಾನೂನಾತ್ಮಕವಾಗಿ ಕಠಿಣ ಕ್ರಮ ಕೈಗೊಳ್ಳುವಂತೆ ಎಲ್ಲಾ ವೃತ್ತಗಳ ಅಧೀಕ್ಷಕ ಅಭಿಯಂತರರುಗಳಿಗೆ ಹಾಗೂ ಎಲ್ಲಾ ವಿಭಾಗಗಳ ಕಾರ್ಯಪಾಲಕ ಅಭಿಯಂತರರುಗಳಿಗೆ ಕಟ್ಟುನಿಟ್ಟಾದ ನಿರ್ದೇಶನ ನೀಡುವಂತೆ ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿಲಾಗಿದೆ ಎಂದು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ಸಚಿವರು ತಿಳಿಸಿದ್ದಾರೆ.