Tuesday, 25th June 2024

ನಾಳೆ ರಾಜ್ಯ ಸರ್ಕಾರ ಒಂದು ವರ್ಷದ ಸಂಭ್ರಮ: ವಿಪಕ್ಷದಿಂದ ಚಾರ್ಜ್‌ಶೀಟ್..!

ಬೆಂಗಳೂರು: ಲೋಕಸಭೆ ಚುನಾವಣೆ-2024 ಅಂತಿಮ ಘಟ್ಟಕ್ಕೆ ತಲುಪುತ್ತಿರುವ ಹೊತ್ತಿನಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಒಂದು ವರ್ಷವಾಗುತ್ತಿದೆ. ಒಂದೆಡೆ ನಾಳೆ ಮೇ 20ರಂದು ರಾಜ್ಯ ಸರ್ಕಾರ ಒಂದು ವರ್ಷದ ಸಂಭ್ರಮದಲ್ಲಿದ್ದರೆ ವಿರೋಧ ಪಕ್ಷ ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ಚಾರ್ಜ್‌ಶೀಟ್ ರೆಡಿ ಮಾಡಿದ್ದು ರಾಜ್ಯಪಾಲರಿಗೆ ದೂರು ನೀಡಲು ಮುಂದಾಗಿದೆ.

ರಾಜ್ಯ ಸರ್ಕಾರದ ವಿರುದ್ಧ ಈಗಾಗಲೇ ಮುಗಿ ಬೀಳುತ್ತಿರುವ ಬಿಜೆಪಿಗರು ಕಾನೂನು ಸುವ್ಯವಸ್ಥೆ ಬಗ್ಗೆಯೂ ಟೀಕೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಇತ್ತೀಚೆಗೆ ಸರಣಿ ಕೊಲೆ, ಅತ್ಯಾಚಾರ, ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ಜನತೆಯ ಬದುಕಿಗೆ ಭದ್ರತೆ ಇಲ್ಲದಾಗಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ ಎಂದು ಬಿಜೆಪಿ ಆರೋಪಿಸಿದ್ದು ನಾಳೆ ರಾಜ್ಯಾದ್ಯಂತ ಪ್ರತಿಭಟನೆಗೆ ಮುಂದಾಗಿದೆ.

ರಾಜ್ಯದಲ್ಲಿ ಎಂದೂ ಕಂಡರಿಯದ ಭೀಕರ ಬರಗಾಲ ಬಂದಿದೆ. ಆದರೆ, ಬರ ನಿರ್ವಹಣೆಯಲ್ಲಿ ವಿಫಲವಾಗಿದೆ. ರೈತರಿಗೆ ಪರಿಹಾರ ನೀಡಿಲ್ಲ. ರೈತರ ಬದುಕು ದುಸ್ತರವಾಗಿದೆ. ಕೇಂದ್ರ ಸರ್ಕಾರ ನೀಡಿದ ಬರ ಪರಿಹಾರದ ಹಣವೂ ರೈತರಿಗೆ ತಲುಪುತ್ತಿಲ್ಲ. ಅದನ್ನು ಬ್ಯಾಂಕ್‌ಗಳು ಸಾಲಕ್ಕೆ ಬಳಸಿಕೊಳ್ಳುತ್ತಿವೆ. ಇನ್ನು ಸರ್ಕಾರವು ಒಂದು ವರ್ಷದಲ್ಲಿ ಹೊಸ ಕಾಮಗಾರಿಗಳಿಗೆ ಗುದ್ದಲಿ ಪೂಜೆಯನ್ನೂ ಮಾಡಿಲ್ಲ.

ಇಷ್ಟಲ್ಲದೆ ಶಾಸಕರ ಪರಿಸ್ಥಿತಿ ಇನ್ನೂ ಕಷ್ಟಕರವಾಗಿದೆ. ಶಾಸಕರಿಗೆ ಅನುದಾನ ಕೊಡಲು ಹಣವಿಲ್ಲ. ಅನುದಾನ ಕೊಡುತ್ತೇವೆ, ಕೊಡುತ್ತೇವೆ ಎಂದೇ ದಿನ ದೂಡುತ್ತಿದೆ ಎಂದು ಸ್ವಪಕ್ಷೀಯ ಶಾಸಕರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂಬುದನ್ನು ಜನರ ಮುಂದಿಡಲು ಬಿಜೆಪಿ ಮುಂದಾಗಿದೆ.

Leave a Reply

Your email address will not be published. Required fields are marked *

error: Content is protected !!