ಬೆಂಗಳೂರು: ಇದೀಗ ವಿಧಾನಸಭೆಯಿಂದ ವಿಧಾನ ಪರಿಷತ್ಗೆ ಆಯ್ಕೆಯಾಗುವ ಮೂರು ಸ್ಥಾನಕ್ಕೆ ಚುನಾವಣಾ ವೇಳಾಪಟ್ಟಿ ಈಗಾಗಲೇ ಪ್ರಕಟ ವಾಗಿದ್ದು, ಮಂಗಳವಾರ ಅಧಿಸೂಚನೆ ಪ್ರಕಟವಾಗಿದೆ.
ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ಜೂ.20 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಜೂ. 21 ರಂದು ನಾಮಪತ್ರ ಪರಿಷ್ಕರಣೆ ನಡೆಯಲಿದೆ. 23ಕ್ಕೆ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದು, ಜೂ. 30 ರ ಬೆಳಗ್ಗೆ 9 ರಿಂದ 4 ಗಂಟೆ ವರೆಗೆ ಚುನಾವಣೆ ನಡೆಯಲಿದೆ. ಅಂದು ಸಂಜೆ ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾ ಆಯೋಗ ಹೊರಡಿಸಿರುವ ವೇಳಾಪಟ್ಟಿಯಲ್ಲಿ ತಿಳಿಸಿದೆ.
ವಿಧಾನಸಭೆ ಕಾರ್ಯದರ್ಶಿ ಎಂ. ಕೆ. ವಿಶಾಲಾಕ್ಷಿ ಅವರು ಚುನಾವಣಾಧಿಕಾರಿ ಆಗಿದ್ದಾರೆ.
ವಿಧಾನಸಭೆ ಚುನಾವಣೆಗೂ ಮುನ್ನ ನಡೆದ ಬೆಳವಣಿಗೆಯಲ್ಲಿ ಬಿಜೆಪಿ ತೊರೆದಿದ್ದ ಬಾಬುರಾವ್ ಚಿಂಚನಸೂರು, ಆರ್. ಶಂಕರ್ ಮತ್ತು ಲಕ್ಷ್ಮಣ ಸವದಿ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರಿಂದಾಗಿ ತೆರವಾಗಿರುವ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಚಿಂಚನಸೂರ್ ಸದಸ್ಯತ್ವದ ಅವಧಿ 2024ರ ಜೂ.17 ವರೆಗೆ, ಶಂಕರ್ ಸದಸ್ಯತ್ವ 2026 ಜೂ.30ರ ವರೆಗೆ ಹಾಗೂ ಸವದಿ ಸದಸ್ಯತ್ವ ಅವಧಿ 2028ರ ಜೂನ್ 14ರವರೆಗೆ ಇತ್ತು. ಈ ಮೂರು ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಅವಿರೋಧ ಆಯ್ಕೆ ನಿಶ್ಚಿತವಾಗಿದೆ.
ಮೂರು ಸದಸ್ಯ ಸ್ಥಾನಗಳಿಗೆ ನಡೆಯುತ್ತಿರುವ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡದೆ ತಟಸ್ಥವಾಗಿರಲು ಜೆಡಿಎಸ್ ಪಕ್ಷ ನಿರ್ಧರಿಸಿದೆ. ಜೂನ್ 30 ರಂದು ಮತದಾನ ನಡೆಯುವ ಪರಿಷತ್ ಉಪಚುನಾವಣೆಯಲ್ಲಿ ಯಾವುದೇ ಅಭ್ಯರ್ಥಿಗೆ ಬೆಂಬಲ ನೀಡದಿರಲು ಜೆಡಿಎಸ್ ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.