ಸಿದ್ದರಾಮಯ್ಯ ಅವರ ಕಾರಿಗೆ ಮುತ್ತಿಗೆ – ಆಧಿವೇಶನ ಪೂರ್ಣಗೊಳ್ಳುವ ವೇಳೆಗೆ ತೀರ್ಮಾನ ಕೈಗೊಳ್ಳುವಂತೆ ಒತ್ತಾಯ
ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪೌರ ಕಾರ್ಮಿಕರು ಹಾಗೂ ಮೇಲ್ವಿಚಾರಕರನ್ನು ಖಾಯಂ ಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ನಗರಪಾಲಿಕೆ, ನಗರಸಭೆ, ಪುರಸಭೆಗಳ ಪೌರಕಾರ್ಮಿಕರ ಮಹಾ ಸಂಘದ ಸಹಸ್ರಾರು ಪೌರ ಕಾರ್ಮಿಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆ ಮುಂದೆ ಪ್ರತಿಭಟನೆ ನಡೆಸಿದರು. ಮುಖ್ಯಮಂತ್ರಿ ಅವರು ಮನೆ ಯಿಂದ ಹೊರಗಡೆ ಬರುತ್ತಿದ್ದಂತೆ ಅವರ ಕಾರಿಗೆ ಮುತ್ತಿಗೆ ಹಾಕಿ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿ ಕೂಡಲೇ ಪೌರ ಕಾರ್ಮಿಕರನ್ನು ಖಾಯಂಗೊಳಿಸುವಂತೆ ಆಗ್ರಹಿಸಿದರು. ಪೌರ ಕಾರ್ಮಿಕರನ್ನು ಖಾಯಂಗೊಳಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ಬಜೆಟ್ ನಲ್ಲೂ ಕೂಡ ಈ ವಿಷಯ ಪ್ರಸ್ತಾಪಿಸಿಲ್ಲ. ಪ್ರಸಕ್ತ ಅಧಿವೇಶನ ಪೂರ್ಣಗೊಳ್ಳುವ ವೇಳೆಗೆ ಪೌರ ಕಾರ್ಮಿಕರ ಸೇವೆಯನ್ನು ಖಾಯಂಗೊಳಿಸುವಂತೆ ಕೋರಿ ದರು. ಬೇಡಿಕೆಗಳನ್ನು ಸಹಾನುಭೂತಿಯಿಂದ ಪರಿಹರಿಸುವುದಾಗಿ ಮುಖ್ಯಮಂತ್ರಿ ಅವರು ಭರವಸೆ ನೀಡಿದರು.
ನಂತರ ಪೌರಕಾರ್ಮಿಕರ ಮಹಾಸಂಘದ ಬೆಂಗಳೂರು ನಗರ ಅಧ್ಯಕ್ಷ ಬಿ.ಎಂ. ಸುರೇಶ್ ಬಾಬು, ಮಾತನಾಡಿ, ಪೌರ ಕಾರ್ಮಿಕರು ಅತ್ಯಂತ ಸಂಕಷ್ಟದಲ್ಲಿದ್ದು, ಅವರ ಹಿತ ರಕ್ಷಣೆಗೆ ಸರ್ಕಾರ ಮುಂದಾಗಬೇಕು. ಮುಖ್ಯಮಂತ್ರಿ ಅವರು ಈ ಬಾರಿಯ ಬಜೆಟ್ ನಲ್ಲಿ ಸೇವೆ ಖಾಯಂ ಕುರಿತು ಪ್ರಸ್ತಾಪಿಸುವ ನಿರೀಕ್ಷೆ ಇತ್ತು. ಆದರೆ ಈ ಬೆಳಣಿಗೆಯಿಂದ ನಮಗೆ ನಿರಾಶೆಯಾಗಿದೆ. ಸಿದ್ದರಾಮಯ್ಯ ಅವರ ಬಗ್ಗೆ ನಮಗೆ ಅಪಾರ ನಿರೀಕ್ಷೆ ಇದ್ದು, ಅವರು ನಮ್ಮನ್ನು ಭ್ರಮನಿರಸನ ಗೊಳಿಸುವುದಿಲ್ಲ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ನಗರಪಾಲಿಕೆ, ನಗರಸಭೆ, ಪುರಸಭೆಗಳ ಪೌರಕಾರ್ಮಿಕರ ಮಹಾ ಸಂಘದ ರಾಜ್ಯಾಧ್ಯಕ್ಷ ಹಾಗೂ ಪೌರ ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ಟೊಂಕಕಟ್ಟಿ ಜೀವನವನ್ನೇ ಸಮರ್ಪಿಸಿರುವ ನಾರಾಯಣ ಅವರನ್ನು ವಿಧಾನಪರಿಷತ್ತಿಗೆ ನಾಮನಿರ್ದೇಶನ ಮಾಡವಂತೆಯೂ ಮನವಿ ಸಲಿಸಿದ್ದೇವೆ. ನಾರಾಯಣ ಅವರು ಕಳೆದ ೩೫ ವರ್ಷಗಳಿಂದ ಸಮುದಾಯದ ಶ್ರೇಯೋಭಿವೃದ್ಧಿಗಾಗಿ ಕಾರ್ಯನಿರ್ವಹಿಸುತ್ತಿದ್ದು, ಕಾಂಗ್ರೆಸ್ ನಲ್ಲಿ ಸಕ್ರಿಯವಾಗಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಗಳಿಸುವ ಉದ್ದೇಶದಿಂದ ಶೋಷಿತ ಸಮುದಾಯದ ನಾರಾಯಣ್ ಅವರನ್ನು ಈ ಮಹತ್ವದ ಹುದ್ದೆಗೆ ಪರಿಗಣಿಸಬೇಕು ಎಂದರು.
ಈ ಸಂದರ್ಭದಲ್ಲಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅಂಜನೇಯಲು. ಎಂ.ನಾಗರಾಜು (ಹೆಬ್ಬಾಳ), ಬೆಂಗಳೂರು ನಗರ ಜಿಲ್ಲೆ ಉಪಾಧ್ಯಕ್ಷರಾದ ಎಂ.ಜಿ. ಶ್ರೀನಿವಾಸ್, ಡಿ. ಸುಧಾಕರ್, ಎಸ್.ವೆಂಕಟೇಶ್ವರಲು, ಕಾರ್ಯಧ್ಯಕ್ಷ ಹೆಚ್.ಬಿ.ಶೇಖರ್, ಮಹಿಳಾ ಘಟಕದ ಅಧ್ಯಕ್ಷರಾದ ಲಕ್ಷಮ್ಮ, ಸಹ ಪ್ರಧಾನ ಕಾರ್ಯದರ್ಶಿ ಗಂಗಣ್ಣ ಕಾರ್ಯದರ್ಶಿ, ಬಿ. ಆನಂದಕುಮಾರ್, ಸಂಘನಾ ಕಾರ್ಯದರ್ಶಿ ಎಸ್.ಆರ್.ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.