Thursday, 3rd October 2024

ನ.15ರಿಂದ ಡಿ.31ರ ನಡುವೆ ಪುನೀತ್ ಉಪಗ್ರಹ ಉಡಾವಣೆ

ಬೆಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ನಿರ್ಮಿಸುತ್ತಿರುವ ಪುನೀತ್ ಉಪಗ್ರಹವನ್ನು ನ.15ರಿಂದ ಡಿ.31ರ ನಡುವೆ ಶ್ರೀಹರಿಕೋಟಾದ ಕೇಂದ್ರದಿಂದ ಉಡಾವಣೆ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ ಹೇಳಿದ್ದಾರೆ.

ವಿಕಾಸಸೌಧದಲ್ಲಿ ಈ ಉಪಗ್ರಹ ಯೋಜನೆಯ ಪ್ರಗತಿ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಶಾಲಾ ಮಕ್ಕಳಲ್ಲಿ ವೈಜ್ಞಾನಿಕ ಕುತೂಹಲ ಮತ್ತು ಆಸಕ್ತಿ ಬೆಳೆಸಲು ಪ್ರೌಢಶಾಲಾ ಮತ್ತು ಪದವಿಪೂರ್ವ ವಿದ್ಯಾರ್ಥಿಗಳಿಗೆ ಜಿಲ್ಲೆ, ವಿಭಾಗೀಯ ಮತ್ತು ರಾಜ್ಯ ಮಟ್ಟದ ಸ್ಪರ್ಧೆ ನಡೆಸಲಾಗುತ್ತಿದೆ. ಇದರಲ್ಲಿ ಅಂತಿಮವಾಗಿ 1 ಸಾವಿರ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಉಪಗ್ರಹ ಉಡಾವಣೆ ಕಾರ್ಯಕ್ರಮಕ್ಕೆ ಆಂಧ್ರಪ್ರದೇಶದ ಶ್ರೀಹರಿ ಕೋಟಾಕ್ಕೆ ಕರೆದುಕೊಂಡು ಹೋಗಲಾಗುವುದು,” ಎಂದು ತಿಳಿಸಿದರು.

ಎಲ್ಲಾ ಜಿಲ್ಲೆಗಳ ಡಿಡಿಪಿಐಗಳಿಗೆ ಸೂಚನೆಈ ಸ್ಪರ್ಧೆ ಭಾಗವಾಗಿ ಪ್ರೌಢಶಾಲಾ ಮಕ್ಕಳಿಗೆ ಆನ್‌ಲೈನ್‌ ರಸಪ್ರಶ್ನೆ, ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆ, ಪಿಯುಸಿ ವಿದ್ಯಾರ್ಥಿಗಳಿಗೆ ಪ್ರಬಂಧ ರಚನೆ, ಖಗೋಳ ವಿಜ್ಞಾನಕ್ಕೆ ಸಂಬಂಧಿಸಿದ ಪೋಸ್ಟರ್ ರಚನೆ ಏರ್ಪಡಿಸಲಾಗುತ್ತಿದೆ. ಈ ಸಂಬಂಧ ಎಲ್ಲಾ 31 ಜಿಲ್ಲೆಗಳ ಡಿಡಿಪಿಐಗಳಿಗೆ ಸೂಚನೆ ಕೊಡಲಾಗಿದೆ ಎಂದು ಸಚಿವರು ತಿಳಿಸಿದರು.

ವಿದ್ಯಾರ್ಥಿಗಳ ಉಪಗ್ರಹಕ್ಕೆ ಪುನೀತ್ ಹೆಸರು
ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಇರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಈ ವಿದ್ಯಾರ್ಥಿಗಳಿಗೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ದಿವಂಗತ ನಟ ಪುನೀತ್ ರಾಜಕುಮಾರ್ ಸ್ಮರಣಾರ್ಥ ಈ ಉಪಗ್ರಹಕ್ಕೆ ಅವರ ಹೆಸರನ್ನು ಇಡಲಾಗಿದೆ. ಪ್ರಧಾನಿಯವರ ಕಾರ್ಯಕ್ರಮದಡಿ ಉಡಾವಣೆಗೊಳ್ಳುತ್ತಿರುವ ದೇಶದ ಪ್ರಥಮ ಉಪಗ್ರಹ ಇದಾಗಿದೆ,” ಎಂದು ಸಚಿವರು ವಿವರಿಸಿದರು.