Thursday, 12th December 2024

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿಚಾರಣೆ ಇಂದು

ಬೆಂಗಳೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮೈಸೂರು ಜಿಲ್ಲಾಧಿಕಾರಿ ಯಾಗಿದ್ದ ವೇಳೆ ಕೇಳಿ ಬಂದ ಆರೋಪಗಳಿಗೆ ಸಂಬಂಧಪಟ್ಟಂತೆ ಅವರಿಗೆ ನೊಟೀಸ್ ನೀಡಲಾಗಿದ್ದು, ಸರ್ಕಾರದ ಕಾರ್ಯದರ್ಶಿ ಡಾ.ಜೆ.ರವಿಶಂಕರ್‌ ಅವರು ನೊಟೀಸ್ ಕಳುಹಿಸಿದ್ದಾರೆ. ಶನಿವಾರ ಖುದ್ದು ಕಚೇರಿಗೆ ಹಾಜರಾಗಿ ಆರೋಪಗಳಿಗೆ ಉತ್ತರಿಸಲು ಅವರಿಗೆ ಸೂಚಿಸಲಾಗಿದೆ.

ಅವರು ಮೈಸೂರು ಜಿಲ್ಲಾಧಿಕಾರಿಯಾಗಿದ್ದ ವೇಳೆ ಹಲವು ಆರೋಪಗಳು ಕೇಳಿಬಂದು ನಂತರ ಬೆಂಗಳೂರಿಗೆ ಧಾರ್ಮಿಕ ದತ್ತಿ ಇಲಾಖೆಗೆ ವರ್ಗಾವಣೆಗೊಂಡರು.

ಐಎಎಸ್ ಅಧಿಕಾರಿ ರೋಹಿಣಿ ವಿರುದ್ಧ ತನಿಖೆ ನಡೆಸುವಂತೆ ಜೆಡಿಎಸ್ ಶಾಸಕ ಸಾ.ರಾ. ಮಹೇಶ್ ದೂರು ನೀಡಿದ್ದರು. ಈ ಹಿನ್ನೆಲೆ ಸರ್ಕಾರಕ್ಕೆ ಸಮಗ್ರ ವರದಿ ನೀಡುವ ಸಲುವಾಗಿ ಒಟ್ಟು 5 ಗಂಭೀರ ಆರೋಪಗಳ ಬಗ್ಗೆ ಹೇಳಿಕೆ ನೀಡಲು ಸೂಚಿಸಲಾಗಿದೆ.

ಮೈಸೂರು ಜಿಲ್ಲಾಧಿಕಾರಿಯಾಗಿದ್ದ ವೇಳೆ ಪರಿಸರ ಸ್ನೇಹಿ ಬಟ್ಟೆ ಬ್ಯಾಗ್ ವಿಚಾರದಲ್ಲಿ ಕೋಟ್ಯಂತರ ಹಣ ಅಕ್ರಮ, ಪಾರಂಪರಿಕ ಕಟ್ಟಡದಲ್ಲಿ ಅಕ್ರಮ ಈಜುಕೊಳ ನಿರ್ಮಾಣ ಆರೋಪ, ಪಾರಂಪರಿಕ ಜಿಲ್ಲಾಧಿಕಾರಿ ನಿವಾಸದಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನೆಲಹಾಸು, ಚಾಮರಾಜನಗರ ಜಿಲ್ಲಾಸ್ಪತ್ರೆ ಆಕ್ಸಿಜನ್ ದುರಂತ ವಿಚಾರ ಸೇರಿದಂತೆ ಒಟ್ಟು 5 ಗಂಭೀರ ಆರೋಪಗಳ ಬಗ್ಗೆ ಹೇಳಿಕೆ ನೀಡಲು ಸರ್ಕಾರ ರೋಹಿಣಿ ಸಿಂಧೂರಿಯವರಿಗೆ ಸೂಚನೆ ನೀಡಿದೆ.