Sunday, 24th November 2024

ವಾಸ್ತು, ಆಗಮದಿಂದ ದೇಗುಲಕ್ಕೆ ಶೋಭೆ: ರಾಘವೇಶ್ವರ ಶ್ರೀ

ಬೆಂಗಳೂರು: ದೇವಾಲಯಗಳು ಇತ್ತೀಚೆಗೆ ಶಾಸ್ತ್ರದ ಬದಲು ಆಡಂಬರದ ಪ್ರದರ್ಶನಕ್ಕೆ ಮಾತ್ರ ಎಂಬಂಥ ವಿಕಟ ಸ್ಥಿತಿ ಇದೆ. ವಾಸ್ತು, ಜ್ಯೋತಿಷ್ಯ, ಆಗಮಗಳು ಸರಿಯಾಗಿದ್ದಾಗ ಮಾತ್ರ ದೇವಾಲಯಕ್ಕೆ ಶೋಭೆ. ಆದ್ದರಿಂದ ದೇವಾಲಯಗಳು ಶಾಸ್ತ್ರೋಕ್ತವಾಗಿ ನಿರ್ಮಾಣ ಗೊಳ್ಳಬೇಕು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.

ಗಿರಿನಗರದ ಮಹಾಗಣಪತಿ ದೇವಾಲಯದಲ್ಲಿ ಬುಧವಾರ ನಡೆದ ಅಷ್ಟಬಂಧ- ಪುನಃ ಪ್ರತಿಷ್ಠೆ- ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಧರ್ಮಸಭೆಯಲ್ಲಿ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀವರ್ಚನ ನೀಡಿದರು. ದೇಗುಲಗಳು ನಮ್ಮ ಪರಂಪರೆಯ ಭಾಗ. ಭಾರತದ ಪರಂಪರೆ ಅನುಪಮವಾಗಿದ್ದು, ಪರಂಪರೆಯನ್ನು ಮೂಢನಂಬಿಕೆ ಎನ್ನಲಾ ಗದು. ನಮ್ಮ ಆಚರಣೆಗಳು ವೈಜ್ಞಾನಿಕವಾಗಿದ್ದು, ತಿಳಿದಷ್ಟೂ ಬೆರಗು ಹುಟ್ಟಿಸುವ ಸಂಸ್ಕøತಿ ನಮ್ಮದು ಎಂದರು.

ಜೀವನದಲ್ಲಿ ಪರೀಕ್ಷೆಗಳು ಬೇಕು. ವಿಘ್ನಕರ್ತ ಮತ್ತು ವಿಘ್ನ ನಿವಾರಕನಾಗಿರುವ ಗಣಪತಿ ಪರೀಕ್ಷೆಗಳನ್ನು ಒಡ್ಡಿ ಜೀವನದಲ್ಲಿ ಉನ್ನತಿ ಸಾಧಿಸಲು ಪ್ರೇರಣೆಯಾಗುತ್ತಾನೆ. ಗುರು ದಾರಿ ತೋರಿಸಿದರೆ, ಗಣಪತಿ ವಿಘ್ನವನ್ನು ನಿವಾರಿಸುತ್ತಾನೆ. ಜೀವನದಲ್ಲಿ ಗುರಿ ಮುಟ್ಟಲು ಗುರು ಗಣಪತಿಯರ ಅನುಗ್ರಹ ಮುಖ್ಯ, ಗಿರಿನಗರದಲ್ಲಿ ಶ್ರೀ ಮಹಾಗಣಪತಿ ಸನ್ನಿಧಿ ಹಾಗೂ ಶ್ರೀ ರಾಘವೇಂದ್ರಭಾರತೀ ಸ್ವಾಮೀಜಿಯವರ ಸಮಾಧಿ ಎರಡೂ ಇವೆ. ಇವೆರಡೂ ಶ್ರದ್ಧಾಕೇಂದ್ರಗಳು ಎಂದರು.

ಬಸವನಗುಡಿ ಶಾಸಕರು ಹಾಗೂ ಅಷ್ಟಬಂಧ ಸಮಿತಿಯ ಗೌರವಾಧ್ಯಕ್ಷ ಶ್ರೀ ಎಲ್.ಎ.ರವಿಸುಬ್ರಹ್ಮಣ್ಯ ಮಾತನಾಡಿ, ಶ್ರೀರಾಮ ಚಂದ್ರಾ ಪುರ ಮಠ ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಸಲ್ಲಿಸುತ್ತಿರುವ ಸೇವೆ ಅಪಾರವಾಗಿದ್ದು, ಶ್ರೀಗಳ ಮಾರ್ಗದರ್ಶನದಿಂದ ಅಷ್ಟಬಂಧ ಕಾರ್ಯಕ್ರಮ ಸುಲಲಿತವಾಗಿ ಸಂಪನ್ನವಾಗಿದೆ. ಗಿರಿನಗರದ ನಿರ್ಮಾತೃಗಳಾದ ದಿವಂಗತ ಶ್ರೀ ಕೃಷ್ಣ ಭಟ್ಟರು ಈ ಬಡಾವಣೆ ನಿರ್ಮಿಸುವಾಗಲೆ ದೇವಾಲಯಗಳಿಗೆ ಜಾಗ ನೀಡಿ ಬಡಾವಣೆ ನಿರ್ಮಿಸಿದ್ದಾರೆ. ಗಿರಿನಗರದ ಮಹಾಗಣಪತಿ ದೇವರ ಅನುಗ್ರಹದಿಂದ ನಮ್ಮ ಕ್ಷೇತ್ರ ಪ್ರಶಾಂತವೂ, ಸುಭಿಕ್ಷವೂ ಆಗಿದೆ ಎಂದರು.

ಪ್ರಸಿದ್ದ ದೈವಜ್ಞರಾದ ವಿಷ್ಣು ಪುಚ್ಚಕ್ಕಾಡು, ಅಷ್ಟಬಂಧ ಸಮಿತಿಯ ಅಧ್ಯಕ್ಷರಾದ ಡಾ. ಬಿ.ಕೆ ವಿಶ್ವನಾಥ್ ಭಟ್, ಚಿತ್ತಾಪುರದ ಸವಿತಾ ಪೀಠ ಮಹಾಸಂಸ್ಥಾನದ ಶ್ರೀ ಶ್ರೀಧರಾನಂದ ಸರಸ್ವತಿ ಸ್ವಾಮೀಜಿ, ಸಿಗಂದೂರು ಪ್ರಧಾನ ಅರ್ಚಕರಾದ ಶ್ರೀ ಶೇಷಗಿರಿ ಭಟ್, ಡಾ. ವಿದ್ಯಾ ಭಟ್, ಕಾರ್ಪೊರೇಟರ್ ನಂದಿನಿ ವಿಠಲ್ ಉಪಸ್ಥಿತರಿದ್ದರು.

ಇದಕ್ಕೂ ಮೊದಲು ಬೆಳಗ್ಗೆ ಶ್ರೀಮಹಾಗಣಪತಿ, ಸುಬ್ರಹ್ಮಣ್ಯ ಹಾಗೂ ನಾಗದೇವರ ಪುನಃಪ್ರತಿಷ್ಠೆ ಅಷ್ಟಬಂಧ ಕಾರ್ಯಕ್ರಮಗಳು ಶ್ರೀಗಳ ದಿವ್ಯ ಉಪಸ್ಥಿತಿಯಲ್ಲಿ ನಡೆದವು. ಸುಬ್ರಹ್ಮಣ್ಯ ದೇವರಿಗೆ ನೂತನ ಶಿಲಾಮಯ ಗುಡಿ, ಸುವರ್ಣ ಕವಚಗಳ ಸಮರ್ಪಣೆ ನಡೆದವು. ಪ್ರತಿಷ್ಠಾ ಕಾರ್ಯಕ್ರಮದಲ್ಲಿ ಹವ್ಯಕ ಮಹಾಸಭೆಯ ಅಧ್ಯಕ್ಷರಾದ ಡಾ.ಗಿರಿಧರ ಕಜೆ, ಹೈಕೋರ್ಟ್ ಸೀನಿಯರ್ ಅಡ್ವಕೇಟ್ ಶ್ರೀ ರಾಘವನ್ ಉಪಸ್ಥಿತರಿದ್ದರು.

ಶಾಸಕರು ಸಹಸ್ರಮೋದಕ ಹವನದಲ್ಲಿ ಯಜಮಾನರಾಗಿ ಭಾಗಿಯಾದರು. ಕೇರಳದ ಶ್ರೀ ಅನಂತಪದ್ಮನಾಭ ದೇವಾಲಯದ ಪ್ರಧಾನ ಅರ್ಚಕರಾದ ಶ್ರೀ ನಾರಾಯಣ ಪಟ್ಟೇರಿ, ಶ್ರೀ ಶಿವಪ್ರಸಾದ್ ಮುಂತಾದ ತಂತ್ರಿಗಳು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.