Thursday, 19th September 2024

Raja Chendur: ಖ್ಯಾತ ಕಾದಂಬರಿಕಾರ, ಅನುವಾದಕ ರಾಜಾ ಚೆಂಡೂರ್ ಅನಾರೋಗ್ಯದಿಂದ ನಿಧನ

Raja Chendur

ಬೆಂಗಳೂರು: ಖ್ಯಾತ ಕಾದಂಬರಿಕಾರ, ಅನುವಾದಕ, ಚಿತ್ರಸಾಹಿತಿ, ನಿರ್ದೇಶಕ ರಾಜಾ ಚೆಂಡೂರ್ (65) ಅವರು ಅನಾರೋಗ್ಯದಿಂದ ನಗರದ ಬಿಜಿಎಸ್‌ ಅಸ್ಪತ್ರೆಯಲ್ಲಿ ಮಂಗಳವಾರ ನಿಧನರಾದರು. ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆಯವರಾದ ರಾಜಾ ಚೆಂಡೂರ್ ಅವರು ಬೆಂಗಳೂರಿನ ಆರ್.ಆರ್.ನಗರದ ಪಟ್ಟಣಗೆರೆಯಲ್ಲಿ ನೆಲೆಸಿದ್ದರು. ಕೆಲ ಸಮಯದಿಂದ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅವರನ್ನು ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.

ಹತ್ತು ಸ್ವತಂತ್ರ ಕಾದಂಬರಿಗಳನ್ನು ಕನ್ನಡ ಸಾಹಿತ್ಯಕ್ಕೆ ಕೊಡುಗೆಯಾಗಿ ನೀಡಿರುವ ರಾಜಾ ಚೆಂಡೂರ್ ಅನುವಾದಕರಾಗಿಯೂ ಪ್ರಸಿದ್ಧರಾಗಿದ್ದರು. ತೆಲುಗು ಭಾಷೆಯ ಪ್ರಖ್ಯಾತ ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ ಅವರ ‘ರಕ್ತ ಸಿಂಧೂರ’ ಕಾದಂಬರಿ ಅನುವಾದದ ಮೂಲಕ ಅನುವಾದಕರಾದ ಅವರು ನಂತರದ ದಿನಗಳಲ್ಲಿ ಯಂಡಮೂರಿ ಅವರ 40ಕ್ಕೂ ಹೆಚ್ಚು ಕಾದಂಬರಿಗಳನ್ನು ಕನ್ನಡಕ್ಕೆ ತಂದಿದ್ದರು. ಅಲ್ಲದೆ, ತೆಲುಗಿನ ಮಲ್ಲಾದಿ ವೆಂಕಟಕೃಷ್ಣಮೂರ್ತಿ, ಸೂರ್ಯದೇವರ ರಾಮಮೋಹನರಾವ್ ಮೊದಲಾದವರ ಕೃತಿಗಳನ್ನೂ ಕನ್ನಡಕ್ಕೆ ಪರಿಚಯಿಸಿದ್ದಾರೆ.

ಚೆಂಡೂರು ಪ್ರಕಾಶನ ಭಾಗೀರಥಿ ಪ್ರಕಾಶನ ಹಾಗೂ ನೆಮ್ಮದಿ ಪ್ರಕಾಶನ ಸ್ಥಾಪಿಸಿ ಪುಸ್ತಕ ಪ್ರಕಟಣೆಗಳನ್ನೂ ಮಾಡಿರುವ ಅವರು, ಹಲವಾರು ರೆಡಿಯೋ ನಾಟಕಗಳನ್ನೂ ಬರೆದಿದ್ದಾರೆ. ದೂರದರ್ಶನ ಧಾರಾವಾಹಿಗಳಿಗೆ ಕೆಲಸ ಮಾಡಿದ ಅವರು ಸಾಹಿತ್ಯ ಚಿತ್ರಕಥೆ ಬರೆದು ನಾಲ್ಕು ಧಾರಾವಾಹಿಗಳನ್ನು ನಿರ್ದೇಶಿಸಿದ್ದರು. ಇವರ ಬರಹಗಳು ಕನ್ನಡ ಭಾಷೆಯ ಅನೇಕ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು, ಕನ್ನಡದ ಯಂಡಮೂರಿ ವಿರೇಂದ್ರನಾಥ ಎಂದೇ ಪ್ರಸಿದ್ಧಿಯಾಗಿದ್ದರು. ರೆಡಿಯೋಗೆ ನಾಟಕ ಬರೆಯುತ್ತಿದ್ದ ರಾಜಾ ಚೆಂಡೂರು ಅವರು ಧಾರವಾಹಿ ಕ್ಷೇತ್ರಗಳಲ್ಲಿಯೂ ತಮ್ಮ ಸೇವೆಯನ್ನು ಸಲ್ಲಿಸಿದ್ದರು.

ಮೃತರಿಗೆ ಪತ್ನಿ, ಪುತ್ರಿ ಹಾಗೂ ಅಪಾರ ಅಭಿಮಾನಿಗಳಿದ್ದಾರೆ.  ಮಧ್ಯಾಹ್ನ 3 ಗಂಟೆಗೆ ಚಾಮರಾಜಪೇಟೆ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ ನೆರವೇರಿದೆ.