Saturday, 14th December 2024

ಕರ್ನಾಟಕ ಮೋದಿಗೆ ಮಾವನ ಮನೆ ಆಗಿದೆ

ನೆರೆಯ ವೇಳೆ ಮೊರೆ ಕೇಳದ ಪ್ರಧಾನಿ ಈಗ ಬರುತ್ತಿರುವುದು ಚುನಾವಣಾ ಲಾಭಕ್ಕೆ ಮಾತ್ರ

ಬೆಂಗಳೂರು: ರಾಜ್ಯಕ್ಕೆ ನೆರೆ ಬಂದಾಗ, ಸಂಕಷ್ಟ ಬಂದಾಗ ತಿರುಗಿ ನೋಡದ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಚುನಾವಣೆ ಸಂದರ್ಭದಲ್ಲಿ ಮಾವನ ಮನೆಗೆ ಬಂದಂತೆ ಬರುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ವ್ಯಂಗ್ಯವಾಡಿದ್ದಾರೆ.

ಬಿಟಿಎಂ ಲೇಔಟ್‌ನಲ್ಲಿ ಚುನಾವಣೆ ಪ್ರಚಾರದ ವೇಳೆ ಸುದ್ದಿಗಾರರ ಜತೆಗೆ ಮಾತನಾಡಿ, ರಾಜ್ಯದಲ್ಲಿ ನೆರೆ ಪ್ರವಾಹದಿಂದ ಕೊಡಗು, ಮಲೆನಾಡು ಹಾಗೂ ಉತ್ತರ ಕರ್ನಾಟಕ ಕೊಚ್ಚಿ ಹೋಗಿತ್ತು. ಆಗ ಮೋದಿ ಕನಿಷ್ಠ ಪಕ್ಷ ರಾಜ್ಯದ ಜನರಿಗೆ ಧೈರ್ಯ ತುಂಬುವ ಮಾತುಗಳ ನ್ನಾಡಿರಲಿಲ್ಲ. ಜತೆಗೆ, ನೆರೆ ವೀಕ್ಷಣೆಗೆ ಆಗಮಿಸಿರಲಿಲ್ಲ. ಆದರೆ, ಚುನಾವಣೆ ಇದೆ ಎಂಬ ಕಾರಣಕ್ಕೆ ಪದೇಪದೆ ರಾಜ್ಯಕ್ಕೆ ಆಗಮಿಸುತ್ತಿದ್ದು, ಮಾವನ ಮನೆಗೆ ಬರುವವರಂತೆ ಬಂದು ಹೋಗುತ್ತಿದ್ದಾರೆ. ಇದರ ಬದಲು ರಾಜ್ಯದಲ್ಲಿಯೇ ವಾಸ್ತವ್ಯ ಹೂಡಿದರೆ ಒಳ್ಳೆಯದು ಎಂದು ಸಲಹೆ ನೀಡಿದರು.

ನಗರದಲ್ಲಿ ಶನಿವಾರ ಮತ್ತು ಭಾನುವಾರ ನರೇಂದ್ರ ಮೋದಿ ರ‍್ಯಾಲಿ ನಡೆಸಲಿದ್ದಾರೆ. ಆದರೆ, ಅವರ ರ‍್ಯಾಲಿ ಯಿಂದ ನಗರದ ನಾಗರಿಕರಿಗೆ ಸಾಕಷ್ಟು ತೊಂದರೆಗಳಾಗುತ್ತವೆ. ಮೂರು ದಿನದ ಹಿಂದೆ ಅವರು ನಡೆಸಿದ ರ‍್ಯಾಲಿಯ ವೇಳೆ ಅಂಬ್ಯುಲೆನ್ಸ್ ಸಿಲುಕಿ, ಗರ್ಭಿಣಿಯೊಬ್ಬರು ಚಿಕಿತ್ಸೆ ಸಿಗದೆ ಪರದಾಡಿದ್ದಾರೆ. ಒಂದು ಮದುವೆಗೆ ವರನೇ ಹೋಗಲು ಸಾಧ್ಯವಾಗದೆ ಮದುವೆ ಮುರಿದುಬಿದ್ದ ಪ್ರಕರಣವೂ ವರದಿಯಾಗಿತ್ತು. ಹೀಗೆ ಸಾರ್ವಜನಿಕ ರಿಗೆ ಸಮಸ್ಯೆ ಉಂಟು ಮಾಡುವ ಬದಲು ಅರಮನೆ ಮೈದಾನದಲ್ಲೋ, ನ್ಯಾಷನಲ್ ಕಾಲೇಜು ಮೈದಾನದಲ್ಲೋ ಸಾರ್ವಜನಿಕ ಸಮಾವೇಶ ಮಾಡಲಿ. ಅದನ್ನು ಬಿಟ್ಟು, ಹೀಗೆ ಜನರಿಗೆ ತೊಂದರೆ ನೀಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

೫೦ ಸಾವಿರ ಅಂತರದಲ್ಲಿ ಗೆಲುವು
ಅಮಿತ್ ಶಾ ಬಿಟಿಎಂ ಕ್ಷೇತ್ರದಲ್ಲಿ ರ‍್ಯಾಲಿ ನಡೆಸಿರುವ ಕುರಿತು ಪ್ರತಿಕ್ರಿಯಿಸಿ, ಅವರ ರ‍್ಯಾಲಿಯಲ್ಲಿ ೧೭೦೦ ಪೊಲೀಸರಿದ್ದರು. ಅಷ್ಟೇ ಪ್ರಮಾಣ ದಲ್ಲಿ ಜನರು ಭಾಗವಹಿಸಿದ್ದರು. ಇದರಿಂದ ನನ್ನ ಗೆಲುವು ತಡೆಯಲು ಸಾಧ್ಯವಿಲ್ಲ. ನಮ್ಮ ಕ್ಷೇತ್ರದ ಅಭ್ಯರ್ಥಿ ಏನು ಎಂಬುದು ಕ್ಷೇತ್ರದ ಜನತೆಗೆ ಗೊತ್ತಿದೆ. ನಾನು ಮಾಡಿರುವ ಕೆಲಸಗಳ ಬಗ್ಗೆಯೂ ಜನತೆಗೆ ಗೊತ್ತಿದೆ. ಹೀಗಾಗಿ, ನಾನು ಕಳೆದ ಸಲಕ್ಕಿಂತ ಅತಿ ಹೆಚ್ಚು ಅಂತರದಲ್ಲಿ ಗೆಲುವು ಶತಃಸಿದ್ಧ ಎಂದು ತಿಳಿಸಿದರು