Friday, 1st November 2024

Road Rage: ಬೆಂಗಳೂರಿನಲ್ಲಿ ಮತ್ತೊಂದು ರೋಡ್‌ ರೇಜ್‌, ಮಗುವಿಗೆ ಗಾಯವಾದರೂ ಬಿಡದ ರಾಕ್ಷಸರು!

road rage

ಬೆಂಗಳೂರು: ʼರೋಡ್‌ ರೇಜ್‌ಗಳ ನಗರʼ (Road rage) ಎನಿಸಿಕೊಳ್ಳುತ್ತಿರುವ ರಾಜಧಾನಿ ಬೆಂಗಳೂರಿನಲ್ಲಿ, ಮತ್ತೊಂದು ಹಲ್ಲೆ ಘಟನೆ (Bengaluru crime news) ನಡೆದಿದೆ. ಜನಜಂಗುಳಿಯ ನಡುವೆಯೇ ಒಬ್ಬ ದಂಪತಿಯನ್ನು ಕಾರಿನಿಂದ ಹೊರಗೆಳೆದು ಹಲ್ಲೆ (Assault case) ನಡೆಸಲಾಗಿದೆ. ಈ ಸಂದರ್ಭದಲ್ಲಿ ಹಿಂದಿನ ಸೀಟಿನ ಮೇಲೆ ಕುಳಿತಿದ್ದ ಮಗುವಿಗೆ ಗಾಯವಾಗಿದ್ದು, ಅದನ್ನೂ ಲೆಕ್ಕಿಸದೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ.

ಈ ಕುರಿತ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಲಾಗಿದೆ. ಮಗುವಿನ ತಂದೆ ಅನೂಪ್‌ ಎಂಬವರು ಕಾರು ಚಾಲನೆ ಮಾಡುತ್ತಿದ್ದು, ಈ ಸಂದರ್ಭದಲ್ಲಿ ಬೈಕ್‌ನಲ್ಲಿ ಬಂದ ಇಬ್ಬರು ಕಾರನ್ನು ಅಡ್ಡಗಟ್ಟಿದ್ದಾರೆ. ಕಿಟಕಿ ಗಾಜು ಇಳಿಸಲು ಧಮಕಿ ಹಾಕಿದ್ದಾರೆ. ಅನೂಪ್‌ ಗಾಜು ಇಳಿಸದೆ ಹೋದಾಗ, ಕಲ್ಲಿನಿಂದ ಜಜ್ಜಿ ಗಾಜನ್ನು ಒಡೆದುಹಾಕಿದ್ದಾರೆ.

ಈ ಸಂದರ್ಭದಲ್ಲಿ ಕಲ್ಲು ತಾಗಿ ಮಗುವಿನ ಹಣೆಗೆ ಗಾಯವಾಗಿದೆ. ಐದು ವರ್ಷದ ಮಗು ಜೋರಾಗಿ ಅಳತೊಡಗಿದೆ. ಏನಾಯಿತೆಂದು ನೋಡಲು ಅನೂಪ್‌ ಕಾರು ನಿಲ್ಲಿಸಿದ್ದು, ಈ ಸಂದರ್ಭದಲ್ಲಿ ಅನೂಪ್‌ನ್ನು ಹೊರಗೆಳೆದು ಪುಂಡರು ಥಳಿಸಿದ್ದಾರೆ. ಮಗುವಿಗೆ ಗಾಯವಾಗಿ ತಲೆಯಿಂದ ಜೋರಾಗಿ ರಕ್ತಬಂದಿದ್ದರೂ, ಸುತ್ತಮುತ್ತ ಜನ ಇದ್ದರೂ ಲೆಕ್ಕಿಸದೆ ಈ ಪುಂಡರು ರಾಕ್ಷಸರಂತೆ ವರ್ತಿಸಿದ್ದಾರೆ.

ಹಲ್ಲೆ ನಡೆಸಿದ ಪುಂಡರು ಒಂದಷ್ಟು ದೂರದಿಂದ ತಮ್ಮನ್ನು ಹಿಂಬಾಲಿಸಿ ಬಂದಿದ್ದರೆಂದು ಅನೂಪ್‌ ತಿಳಿಸಿದ್ದಾರೆ. ಮಗುವಿಗೆ ಆಳವಾದ ಗಾಯವಾಗಿದ್ದು, ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಅಲ್ಲಿ ಮಗುವಿನ ಹಣೆಗೆ ಮೂರು ಹೊಲಿಗೆ ಹಾಕಲಾಗಿದ್ದು, 24 ಗಂಟೆ ನಿಗಾದಲ್ಲಿ ಇಡಬೇಕೆಂದು ತಿಳಿಸಿದ್ದಾರೆ ಎಂದು ಅನೂಪ್‌ ತಿಳಿಸಿದ್ದಾರೆ. ಮಗು ಮಾನಸಿಕವಾಗಿ ಈ ಘಟನೆಯಿಂದ ಕ್ಷೋಭೆಗೊಂಡಿದೆ ಎಂದು ದಂಪತಿ ತಿಳಿಸಿದ್ದಾರೆ. ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಯಲ್ಲಿ ಈ ಕುರಿತ ಪ್ರಕರಣ ದಾಖಲಾಗಿದೆ.