Thursday, 12th December 2024

ಮೈಸೂರು ರಸ್ತೆಯಲ್ಲಿ ಮಂಗಳ ಗ್ರಹ !

ಗುಂಡಿಗಳಿಂದ ಕಂಗೆಟ್ಟ ರಸ್ತೆಯಲ್ಲಿ ವಾಹನ ಸಂಚಾರ

ರಸ್ತೆ ಅವ್ಯವಸ್ಥೆಗೆ ನೆಟ್ಟಿಗರ ಆಕ್ರೋಶ

ಬೆಂಗಳೂರು: ಹಿಂದೊಮ್ಮೆ ಹೆರೋಹಳ್ಳಿ ರಸ್ತೆಯಲ್ಲಿ ಬಾದಲ್ ನಂಜುಂಡಸ್ವಾಮಿ ಚಂದ್ರಗ್ರಹ ಸೃಷ್ಟಿ ಮಾಡಿದ್ದರು. ಈಗ ಮೈಸೂರು ರಸ್ತೆಯಲ್ಲಿ ಮಂಗಳ ಗ್ರಹದಂತಹ ವಾತಾವರಣ ಕಾಣುತ್ತಿದೆ ನೋಡಿ….

ಇದು ಮೈಸೂರು ರಸ್ತೆ ಕೆಂಗೇರಿ ಬಳಿಯ ನೈಸ್ ಜಂಕ್ಷನ್‌ನಲ್ಲಿ ಹಾಳಾಗಿರುವ ರಸ್ತೆಯ ಬಗ್ಗೆ ನೆಟ್ಟಿಗರು ಸಿಟ್ಟಾಗಿರುವ ಪರಿ. ಅಲ್ಲಿನ ರಸ್ತೆ ಹಾಳಾದ ಕಾರಣಕ್ಕೆ ವಾಹನಗಳು ನಿಧಾನಗತಿ ಯಲ್ಲಿ ಸಾಗುತ್ತಿರುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿತ್ತು. ಆ ಪೋಸ್ಟ್‌ಗೆ ಸಾವಿರಾರು ಜನರು ಪ್ರತಿಕ್ರಿಯೆ ನೀಡಿ, ಬಿಬಿಎಂಪಿ ಮತ್ತು ಸರಕಾರದ ಆಡಳಿತ ವೈಖರಿ ಬಗ್ಗೆ ಕೆಂಡಕಾರಿದ್ದಾರೆ.

ಬೆಂಗಳೂರಿನ ರಸ್ತೆಗಳಿಗೆ ಹಲವಾರು ಜನ ಬಲಿಯಾಗಿದ್ದಾರೆ. ವಾಹನಗಳು ಅಪಘಾತ ಕ್ಕೀಡಾಗಿವೆ ಎಂಬೆಲ್ಲ ಅಂಶವನ್ನಿಟ್ಟು ಕೊಂಡು ಜಾಲತಾಣಗಳಲ್ಲಿ ವ್ಯಂಗ್ಯವಾಡಿದ್ದಾರೆ. ನೆಟ್ಟಿಗರ ಈ ಪೋಸ್ಟ್‌ಗೆ ಬಯೋಕಾನ್ ಮುಖ್ಯಸ್ಥೆ ಕಿರಣ್ ಮುಜುಂದಾರ್ ಷಾ ಕೂಡ ದನಿಗೂಡಿಸಿದ್ದು, ಹದಗೆಟ್ಟ ರಸ್ತೆಗಳ ಬಗ್ಗೆ ಕಳೆದ ಕೆಲ ದಿನಗಳ ಹಿಂದೆ ಟ್ವೀಟ್ ಮೂಲಕ ಬೇಸರ ಹೊರಹಾಕಿದ್ದಾರೆ.

ಬೆಂಗಳೂರು-ಮೈಸೂರು ನಡುವಿನ ರಸ್ತೆಯ ನೈಸ್ ರಸ್ತೆ ಜಂಕ್ಷನ್ ಸಮೀಪದಲ್ಲಿ ಹತ್ತಾರು ಗುಂಡಿಗಳು ಕಾಣಿಸಿಕೊಂಡಿರುವ ವಿಡಿಯೋ ತುಣುಕನ್ನು ಶ್ರೀರಾಮ್ ಬಿ.ಎನ್.ಎನ್ನು ವವರು ಟ್ವೀಟ್ ಮೂಲಕ ಹಂಚಿಕೊಂಡಿದ್ದರು. ಈ ವಿಡಿಯೋ ರಿಟ್ವೀಟ್ ಮಾಡಿರುವ ಷಾ, ಇದು ಆಘಾತಕಾರಿ ಮತ್ತು ನಾಚಿಕೆ ಗೇಡು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳಪೆ ರಸ್ತೆಗಳ ದುಸ್ಥಿತಿ ಆನೇಕಲ್ ರಾಜಕಾರಣಿಗಳಿಗೆ ನಾಚಿಕೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದ ಬಯೋಕಾನ್
ಮುಖ್ಯಸ್ಥೆ, ಸರ್ಜಾಪುರ ಸುತ್ತಮುತ್ತಲಿನ ಕೆಟ್ಟ ರಸ್ತೆಗಳ ಬಗ್ಗೆ ಟ್ವೀಟ್ ಮಾಡಿದ್ದರು. ಆನೇಕಲ್ ತಾಲೂಕಿನ ಹುಸೂರು-ಸರ್ಜಾಪುರ ರಸ್ತೆ ಸಂಚಾರ ಮಾಡದಿರುವಷ್ಟು ಹದಗೆಟ್ಟಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ಉತ್ತಮ ರಸ್ತೆ ಸೌಕರ್ಯ ನೀಡಲು ಸಾಧ್ಯವಾಗದಿದ್ದರೆ ಸರಕಾರ ಬಸ್ ಡಿಪೋ, ವಸತಿ ಗೃಹಗಳನ್ನು ಇಲ್ಲಿ ಯಾಕೆ ನಿರ್ಮಿಸಬೇಕಿತ್ತು ಎಂದು ಖಾರವಾಗಿ ಪ್ರಶ್ನಿಸಿದ್ದರು. ಇದೀಗ ಮೈಸೂರು ರಸ್ತೆಯ ವಿಡಿಯೋಗೆ ಸಂಬಂಧಿಸಿದಂತೆ ನೆಟ್ಟಿಗರು ಎತ್ತಿರುವ ಪ್ರಶ್ನೆಗೆ ದನಿ ಗೂಡಿಸಿದ್ದಾರೆ.