Friday, 22nd November 2024

ಹಂಗಾಮಿ ಸ್ಪೀಕರ್ ಆಗಿ ಆರ್.ವಿ.ದೇಶಪಾಂಡೆ ನೇಮಕ

ಬೆಂಗಳೂರು : ಕಾಂಗ್ರೆಸ್ ಹಿರಿಯ ಶಾಸಕ ಆರ್.ವಿ.ದೇಶಪಾಂಡೆ ಅವರನ್ನು ಹಂಗಾಮಿ ವಿಧಾನ ಸಭಾಧ್ಯಕ್ಷರನ್ನಾಗಿ ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಸದನದಿಂದ ಹೊಸ ಸಭಾಧ್ಯಕ್ಷರು ಆಯ್ಕೆಯಾಗುವವರೆಗೆ ಕರ್ತವ್ಯ ನಿರ್ವಹಿಸುವಂತೆ ತಿಳಿಸಲಾಗಿದೆ.

ಸೋಮವಾರದಿಂದ ಬುಧವಾರದವರೆಗೆ ಮೂರು ದಿನಗಳ ಕಾಲ ಅಧಿವೇಶನ ನಡೆಯಲಿದೆ. ನೂತನ ಶಾಸಕರು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಪ್ರಮಾಣ ವಚನದ ಕಾರ್ಯ ಕಲಾಪ ನಿರ್ವಹಿಸಲು ಆರ್.ವಿ.ದೇಶಪಾಂಡೆಯವರನ್ನು ವಿಧಾನಸಭೆಯ ಹಂಗಾಮಿ ಸ್ಪೀಕರ್ ಆಗಿ ನೇಮಕ ಮಾಡಲಾಗಿದೆ.

ವಿಧಾನಸಭೆ ಸ್ಪೀಕರ್ ಸ್ಥಾನಕ್ಕೆ ಟಿ.ಬಿ.ಜಯಚಂದ್ರ, ಹೆಚ್.ಕೆ.ಪಾಟೀಲ್, ಬಸವರಾಜ ರಾಯರೆಡ್ಡಿ ಸೇರಿದಂತೆ ಕೆಲವರ ಹೆಸರು ಕೇಳಿ ಬರುತ್ತಿದೆ. ಸ್ಪೀಕರ್ ಹುದ್ದೆಗೆ ಹೆಸರು ಕೇಳಿ ಬರುತ್ತಿರುವ ಶಾಸಕರು ಮಂತ್ರಿಗಿರಿಯ ಮೇಲೂ ಕಣ್ಣಿಟ್ಟಿದ್ದಾರೆ.

ಮೂರು ದಿನಗಳ ವಿಧಾನಸಭೆ ಅಧಿವೇಶನದಲ್ಲಿ ಎಲ್ಲ ನೂತನ ಶಾಸಕರು ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದಾರೆ. ಜುಲೈಯಲ್ಲಿ ನೂತನ ಸರ್ಕಾರದ ಬಜೆಟ್ ಮಂಡಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ತಿಳಿಸಿದ್ದಾರೆ.

ಶಾಸಕರಿಗೆ ಪ್ರಮಾಣ ವಚನ ಬೋಧಿಸಲು ಸೋಮವಾರ, ಮಂಗಳವಾರ ಮತ್ತು ಬುಧವಾರ ಮೂರು ದಿನಗಳ ಕಾಲ ವಿಧಾನಸಭೆಯ ಅಧಿವೇಶನ ಕರೆಯುತ್ತಿದ್ದೇವೆ. ಮೇ 24 ಕ್ಕೂ ಮುನ್ನಾ ಹೊಸ ವಿಧಾನಸಭೆಯನ್ನು ರಚಿಸಬೇಕು. ಹಾಗಾಗಿ, ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಅವರನ್ನು ಹಂಗಾಮಿ ಸ್ಪೀಕರ್ ಮಾಡಲು ವಿನಂತಿಸಲಾಗಿದೆ. ಅಧಿವೇಶನದಲ್ಲಿ ನೂತನ ಸ್ಪೀಕರ್ ಆಯ್ಕೆ ನಡೆಯಲಿದೆ” ಎಂದು ತಿಳಿಸಿದ್ದರು.