Thursday, 12th December 2024

ಸಾಲು ಮರದ ತಿಮ್ಮಕ್ಕ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ಶಿಫ್ಟ್‌

ಬೆಂಗಳೂರು: ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸ ಲಾಗಿದೆ. ಹಾಸನದಿಂದ ಬೆಂಗಳೂರಿನ ಆಸ್ಪತ್ರೆಗೆ ಶಿಫ್ಟ್‌ ಮಾಡಲಾಗಿದ್ದು, ವೈದ್ಯರು ವಿಶೇಷ ವಾರ್ಡ್‌ನಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ.

ಬೆಂಗಳೂರಿನಲ್ಲಿದ್ದ ಸಾಲು ಮರದ ತಿಮ್ಮಕ್ಕ ಅವರು ಇತ್ತೀಚಿಗೆ ಹಾಸನ ಜಿಲ್ಲೆಯ ಬೇಲೂರಿನ ಸಮೀಪದ ಬಳ್ಳೂರಿನಲ್ಲಿ ವಾಸಾಗಿದ್ದರು. ಕಳೆದ ಎರಡು ದಿನಗಳಿಂದ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಉಸಿರಾಟ ಸಮಸ್ಯೆ ಕಾಣಿಸಿಕೊಂಡಿತ್ತು. ಉಸಿರಾಟ ಸಮಸ್ಯೆ ಹೆಚ್ಚಾಗಿದ್ದು, ಕೂಡಲೇ ಅವರನ್ನು ಬಳ್ಳೂರಿನಿಂದ ಬೆಂಗಳೂ ರಿನ ಜಯನಗರದ ಅಪೋಲೋ ಆಸ್ಪತ್ರೆಗೆ ಶಿಫ್ಟ್‌ ಮಾಡಲಾಗಿದೆ.

ಸದ್ಯ ವಾತಾವರಣದಲ್ಲಿ ಬದಲಾವಣೆಯಿಂದ ಎಲ್ಲೆಡೆ ಜ್ವರ, ಕೆಮ್ಮು, ನೆಗಡಿ, ಉಸಿರಾಟದ ಸಮಸ್ಯೆ ಹೆಚ್ಚಾಗು ತ್ತಿದ್ದು, ಸಾಲು ಮರದ ತಿಮ್ಮಕ್ಕ ಅವರಿಗೂ ಇದೇ ಕಾರಣಕ್ಕೆ ಆರೋಗ್ಯ ಹದಗೆಟ್ಟಿದೆ ಎನ್ನಲಾಗಿದೆ. ಬೆಂಗಳೂರಿನ ಅಪೋಲೋ ಆಸ್ಪತ್ರೆಯ ವಿಶೇಷ ವಾರ್ಡ್‌ನಲ್ಲಿ ಚಿಕಿತ್ಸೆ ಮುಂದುವರಿದಿದೆ.

ಕಳೆದ ವಾರ ತಿಮ್ಮಕ್ಕ ಅವರಿಗೆ ಮೈ ಕೈ ನೋವು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಬೇಲೂರು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಇನ್ನು ಎರಡು ತಿಂಗಳ ಹಿಂದೆ ಬೆಂಗಳೂರಿನ ಮಂಜುನಾಥ ನಗರದಲ್ಲಿ ರುವ ನಿವಾಸದಲ್ಲಿ ಕಾಲು ಜಾರಿ ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದರು. ಈ ಸಂದರ್ಭ ದಲ್ಲಿ ಅವರ ಬೆನ್ನು ಮೂಳೆಗೆ ಪೆಟ್ಟಾಗಿತ್ತು. ಬಳಿಕ ಜಯನಗರ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದರು.