Sunday, 15th December 2024

ಸನಾತನ ಧರ್ಮವನ್ನ ತೆಗಳಿದರೆ, ಪರಿಣಾಮ ಎದುರಿಸಬೇಕಾಗುತ್ತದೆ: ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್

ಬೆಂಗಳೂರು: “ಸನಾತನ ಧರ್ಮವನ್ನ ತೆಗಳಿದರೆ, ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಬಿಜೆಪಿಯ ದೊಡ್ಡ ಮಟ್ಟದ ಗೆಲುವಿಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳು. ತಳಮಟ್ಟದಲ್ಲಿನ ಪಕ್ಷದ ಕಾರ್ಯಕರ್ತರು ಅದ್ಭುತವಾಗಿ ಕೆಲಸ ಮಾಡಿದ್ದಾರೆ”ಎಂದು ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಪೋಸ್ಟ್ ಮಾಡಿದ್ದಾರೆ.

ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಯ ಮತ ಎಣಿಕೆಯಲ್ಲಿ ಬಿಜೆಪಿಯು ಮೂರು ರಾಜ್ಯಗಳಲ್ಲಿ ಭಾರಿ ಗೆಲುವಿನತ್ತ ದಾಪುಗಾಲು ಹಾಕುತ್ತಿರುವಾಗ, ಬಿಜೆಪಿಯನ್ನು ಅಭಿನಂದಿಸಿ ಪೋಸ್ಟ್ ಮಾಡಿರುವ ವೆಂಕಟೇಶ್ ಪ್ರಸಾದ್, “ಸನಾತನ ಧರ್ಮವನ್ನು ತೆಗಳಿದರೆ ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದ್ದಾರೆ.

ಕೆಲ ತಿಂಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ತಮಿಳುನಾಡು ಯುವಜನ ಸೇವೆ ಮತ್ತು ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್, ಅಸಮಾನತೆಯ ಆಗರವಾಗಿರುವ ಸನಾತನ ಧರ್ಮವನ್ನು ಮೂಲೋತ್ಪಾಟನೆ ಮಾಡಬೇಕು ಎಂದು ಕರೆ ನೀಡಿದ್ದರು. ಇದರ ಬೆನ್ನಿಗೇ ಅವರ ಹೇಳಿಕೆಯ ಪರ-ವಿರೋಧದ ಚರ್ಚೆ ಗಳು ತೀವ್ರ ಸ್ವರೂಪ ಪಡೆದಿತ್ತು.

ಇದೀಗ ಸನಾತನ ಧರ್ಮದ ಕುರಿತ ಚರ್ಚೆಯನ್ನು ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಮತ್ತೆ ಮುನ್ನೆಲೆಗೆ ತಂದಿದ್ದಾರೆ. #ElectionResults ಎಂಬ ಹ್ಯಾಶ್ ಟ್ಯಾಗ್ ಬಳಸಿ ಅವರು ಪೋಸ್ಟ್ ಮಾಡಿದ್ದಾರೆ.