ಬೆಂಗಳೂರು: ಯಲಹಂಕದ ಸಾತನೂರು ಗ್ರಾಮದಲ್ಲಿ ನಾಟಕದಲ್ಲಿ ಅಭಿನಯಿಸುತ್ತಿರುವಾಗಲೇ ವೇದಿಕೆಯಲ್ಲೇ ಕುಸಿದು ಬಿದ್ದು ಕಲಾವಿದರೊಬ್ಬರು ಮೃತಪಟ್ಟಿದ್ದಾರೆ.
ಎನ್.ಮುನಿಕೆಂಪಣ್ಣ (72) ಮೃತರು. ಯಲಹಂಕದ ಸಾತನೂರು ಗ್ರಾಮದಲ್ಲಿ ʼಕುರುಕ್ಷೇತ್ರʼ ನಾಟಕ ಪ್ರದರ್ಶಿಸುತ್ತಿದ್ದ ವೇಳೆ ನಿಧನ ಹೊಂದಿದ್ದಾರೆ. ಹೃದಯಾಘಾತದಿಂದ ಮೃತಪಟ್ಟ ಮುನಿಕೆಂಪಣ್ಣ ಅವರ ಅಂತ್ಯ ಸಂಸ್ಕಾರ ಅವರ ಹುಟ್ಟೂರು ಅರದೇಶನಹಳ್ಳಿಯಲ್ಲಿ ನಡೆಯಲಿದೆ.
ಕುರುಕ್ಷೇತ್ರʼ ನಾಟಕದಲ್ಲಿ ಮುನಿಕೆಂಪಣ್ಣ ಅವರು ಶಕುನಿ ಪಾತ್ರ ನಿರ್ವಹಿಸುತ್ತಿದ್ದರು. ಮಧ್ಯರಾತ್ರಿಯವರೆಗೂ ಅದ್ಬುತ ಪ್ರದರ್ಶನ ನೀಡಿದ ಅವರು ಒಂದು ಗಂಟೆಯ ವೇಳೆಗೆ ಇದ್ದಕ್ಕಿದ್ದಂತೆ ವೇದಿಕೆ ಮೇಲೆಯೇ ಕುಸಿದು ಬಿದ್ದು ಪ್ರಾಣ ಬಿಟ್ಟಿದ್ದಾರೆ. ಸದ್ಯ ಅವರು ಕುಸಿದು ಬೀಳುತ್ತಿರುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.
ಹಿಂದೆ ಉಪನ್ಯಾಸಕರಾಗಿದ್ದ ಮುನಿಕೆಂಪಣ್ಣ ಅವರು ನಾಟಕದಲ್ಲಿ ಅಪಾರ ಆಸಕ್ತಿ ಹೊಂದಿದ್ದು, ಆಗಾಗ ವೇಷ ಹಚ್ಚುತ್ತಿರುತ್ತಾರೆ. ದೇವನಹಳ್ಳಿಯಲ್ಲಿ ನಡೆದ 28ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.