Thursday, 12th December 2024

ಮುಖ್ಯಮಂತ್ರಿ ಮಾಧ್ಯಮ ಸಂಯೋಜಕರಾಗಿ ಶಂಕರ್‌ ಪಾಗೋಜಿ ನೇಮಕ

ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮಾಧ್ಯಮ ಸಂಯೋಜಕರಾಗಿ ಶಂಕರ್‌ ಪಾಗೋಜಿ ಅವರನ್ನು ನೇಮಕ ಮಾಡಲಾಗಿದೆ.

ಈ ಹಿಂದೆ ಮಾಧ್ಯಮ ಸಂಯೋಜಕರಾಗಿದ್ದ ಗುರುಲಿಂಗ ಸ್ವಾಮಿ ಹೊಳಿಮಠ ಅವರು ಹೃದಯಾಘಾತದಿಂದ ನಿಧನರಾಗಿದ್ದರು.

ಈಗ ಧಾರವಾಡ ಮೂಲದ ಶಂಕರ್‌ ಪಾಗೋಜಿ ಅವರನ್ನು ಸರ್ಕಾರದ ಅಧೀನ ಕಾರ್ಯ ದರ್ಶಿ ಟಿ.ಮಹಂತೇಶ್‌ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ಪತ್ರಕರ್ತ, ಲೇಖಕ ಶಂಕರ ಪಾಗೋಜಿ ಮೂಲತಃ ಧಾರವಾಡ ತಾಲೂಕಿನ ದೇವಗಿರಿ ಯವರು. ಪ್ರಾಥಮಿಕ ಶಿಕ್ಷಣ ಮುಗಿಸಿ ನಂತರ ಮಲೆನಾಡು ಶಿಕ್ಷಣ ಸಮಿತಿ ನಿಗದಿಯಲ್ಲಿ ಪ್ರೌಢಶಿಕ್ಷಣವನ್ನು ಪೂರ್ಣಗೊಳಿಸಿದರು. ಪಿಯುಸಿಯನ್ನು ಧಾರವಾಡದ ಆಲೂರು ವೆಂಕಟರಾವ್ ಜೂನಿಯರ್ ಕಾಲೇಜಿನಲ್ಲಿ ಓದಿದ ಅವರು ಪ್ರಥಮ ಸ್ಥಾನದಲ್ಲಿ ಉತ್ತೀರ್ಣ ರಾದರು.

ಬಿ.ಎ. ಪದವಿಯನ್ನು ಧಾರವಾಡದ ಕಿಟಲ್ ಕಾಲೇಜಿನಲ್ಲಿ, ಪತ್ರಿಕೋದ್ಯಮದಲ್ಲಿ ಸ್ನಾತ ಕೋತ್ತರ ಪದವಿಯನ್ನು ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಪೂರ್ಣಗೊಳಿಸಿದರು. ಕರ್ನಾಟಕದ ಪ್ರಮುಖ ದಿನ ಪತ್ರಿಕೆಗಳಾದ ವಿಜಯ ಕರ್ನಾಟಕ, ಸೂರ್ಯೋದಯ, ಉಷಾ ಕಿರಣ ಪತ್ರಿಕೆಗಳಲ್ಲಿ ವರದಿಗಾರನಾಗಿ ಕಾರ್ಯನಿರ್ವಹಿಸಿದ ಅವರು ವಿದ್ಯುನ್ಮಾನ ಮಾಧ್ಯಮ ಕ್ಷೇತ್ರಗಳಲ್ಲಿ ಕಾರ್ಯ ಚಟುವಟಿಕೆ ಮುಂದುವರೆಸಿ ಕಸ್ತೂರಿ ನ್ಯೂಸ್ ಹಾಗೂ ಸುವರ್ಣ ನ್ಯೂಸ್ ಚಾನೆಲ್ ಗಳಲ್ಲಿ ಕಾರ್ಯನಿರ್ವಹಿಸಿ, ಪ್ರಸ್ತುತ ಉದಯವಾಣಿ ದಿನಪತ್ರಿಕೆಯಲ್ಲಿ ವಿಶೇಷ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಶಂಕರ ಪಾಗೋಜಿ ಅವರು ನಾಟಕಗಳಲ್ಲಿ ಅಭಿನಯಿಸುವ ಹವ್ಯಾಸವನ್ನು ಬೆಳೆಸಿಕೊಂಡಿದ್ದಾರೆ. ಐಪಿಪಿ9 ಯೋಜನೆಯಲ್ಲಿ ಉತ್ತರ ಕರ್ನಾಟಕದ 9 ಜಿಲ್ಲೆಗಳಲ್ಲಿ ಜನ ಸಂಖ್ಯೆ ನಿಯಂತ್ರಣ ಕುರಿತ ಬೀದಿನಾಟಕದ ಉಸ್ತುವಾರಿಯಾಗಿ ಕಾರ್ಯ ನಿರ್ವಹಿಸಿ ದ್ದಾರೆ. ಶಂಕರ ಪಾಗೋಜಿ ಹಲವು ಕೃತಿಗಳನ್ನು ಪ್ರಕಟಿಸಿದ್ದು, ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಥಮ ಕೃತಿಗೆ ಪ್ರಶಸ್ತಿ ಪಡೆದಿದ್ದಾರೆ.