ಬೆಂಗಳೂರು: ಸಿಗರೆಟ್ ಸೇವನೆ ಜಾಗತಿಕ ಆರೋಗ್ಯ ಸಮಸ್ಯೆಗಳಲ್ಲೊಂದು. ಸಿಗರೆಟ್ ಸೇವನೆಯಿಂದ ಪ್ರತಿ ವರ್ಷ 50 ಲಕ್ಷ ಮಂದಿ ಸಾವನ್ನಪ್ಪುತ್ತಾರೆ. ಬೆಂಗಳೂರಿನ ಕೃಷ್ಣದೇವರಾಯ ಕಾಲೇಜಿನ ಡೆಂಟಲ್ ಸೈನ್ಸ್ ವಿಭಾಗದಲ್ಲಿ ಇತ್ತೀಚೆಗೆ ನಡೆದ ಕ್ಲಿನಿಕಲ್ ಪ್ರಯೋಗದಲ್ಲಿ ನಿಕೋಟಿನ್ ರಿಪ್ಲೇಸ್ಸ್ಮೆಂಟ್ ಥೆರಪಿ (NRT) ಸಿಗರೆಟ್ ಚಟ ದೂರಮಾಡಬಹುದು ಎಂದು ಸಾಬೀತುಪಡಿಸಿದೆ.
ಸಾರ್ವಜನಿಕ ದಂತವೈದ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ.ಮುರಳಿ ಆರ್. ನೇತೃತ್ವದಲ್ಲಿ ಡಾ.ಅನಘ ರೆಜಿ ನಡೆಸಿದ ಅಧ್ಯಯನ ಧೂಮಪಾನ ನಿಯಂತ್ರಿಸುವಲ್ಲಿ ಎರಡು ಯಶಸ್ವಿ ಮಾರ್ಗಗಳನ್ನು ಕಂಡುಹಿಡಿದಿದೆ. ನಡವಳಿಕೆ ಕೌನ್ಸಿಲಿಂಗ್ ಹಾಗೂ ನಿಕೋಟಿನ್ ಗಮ್ ನಿಂದ ಧೂಮಪಾನವನ್ನು ಗಣನೀಯ ಪ್ರಮಾಣದಲ್ಲಿ ನಿಯಂತ್ರಿಸಬಹುದು ಎಂದು ಹೇಳಿದೆ.
ಕ್ಲಿನಿಕಲ್ ಪ್ರಯೋಗದಲ್ಲಿ ಪ್ರತಿನಿತ್ಯ ಧೂಮಪಾನ ಮಾಡುವ 18ರಿಂದ 50ರ ನಡುವಿನ ವಯಸ್ಸಿನ 105 ಮಂದಿ ಭಾಗವಹಿಸಿದ್ದರು. 105 ಮಂದಿಯನ್ನು 3 ವಿಭಿನ್ನ ಗುಂಪುಗಳಾಗಿ ವಿಂಗಡಿಸಿ, ಮೊದಲ ಗುಂಪಿನವರಿಗೆ ನಡವಳಿಕೆ ಕೌನ್ಸಿಲಿಂಗ್, 2ನೇ ಗುಂಪಿಗೆ ನಿಕೋಟಿನ್ ಗಮ್ ಸೇವನೆ ಮತ್ತು 3ನೇ ಗುಂಪಿಗೆ ಕೌನ್ಸಿಲಿಂಗ್ ಹಾಗೂ ನಿಕೋಟಿನ್ ಗಮ್ ಸೇವಿಸಲು ತಿಳಿಸಲಾಯಿತು.
12 ವಾರಗಳಲ್ಲಿ 6 ಭೇಟಿಗಳಲ್ಲಿ ಅವರ ಉಸಿರಾಟದ ಪರೀಕ್ಷೆ ನಡೆಸಿದಾಗ ಕಾರ್ಬನ್ ಮನಾಕ್ಸೈಡ್ ಮಟ್ಟ ಗಣನೀಯವಾಗಿ ಇಳಿಕೆ ಯಾಗಿರುವುದು ಕಂಡುಬಂದಿದೆ. ಕೌನ್ಸಿಲಿಂಗ್ ಅಥವಾ ನಿಕೋಟಿನ್ ಗಮ್ ಮಾತ್ರ ಪಡೆದ ಗುಂಪಿಗೆ ಹೋಲಿಸಿದರೆ ಎರಡನ್ನೂ ಪಡೆದ ಗುಂಪಿನ ಮಂದಿಯಲ್ಲಿ ಕಾರ್ಬನ್ ಮೊನಾಕ್ಸೈಡ್ ಮಟ್ಟ ಹೆಚ್ಚಿನ ಪ್ರಮಾಣದಲ್ಲಿ ಇಳಿಕೆಯಾಗಿರುವುದು ಕಂಡುಬಂದಿದೆ ಎಂದು ಅಧ್ಯಯನವು ತಿಳಿಸಿದೆ.
ಫಾರಂ ಫಾರ್ ಇಂಟಿಗ್ರೇಟೆಡ್ ಡೆವಲಪ್ ಮೆಂಟ್ ಆಯಂಡ್ ರಿಸರ್ಚ್ (FIDR) ನಿರ್ದೇಶಕಿ ಆಶಾ ವರ್ಣೆಕರ್, ‘ಈ ಅಧ್ಯಯನ ಜಾಗತಿಕ ತಂಬಾಕು ಸಾಂಕ್ರಾಮಿಕವನ್ನು ನಿಯಂತ್ರಿಸಲು ಮಹತ್ವದ ಭರವಸೆ ನೀಡಿದೆ. ವಿಶೇಷವಾಗಿ ಭಾರತದ ಬೆಂಗಳೂರಿ ನಂತಹ ಪ್ರದೇಶಗಳಲ್ಲಿ ಧೂಮಪಾನ ಸಾರ್ವಜನಿಕ ಆರೋಗ್ಯದ ಪ್ರಮುಖ ಸಮಸ್ಯೆಯಾಗಿ ಮುಂದುವರಿದಿದೆ.
ನಿಕೋಟಿನ್ ರಿಪ್ಲೇಸ್ಮೆಂಟ್ ಮತ್ತು ನಡವಳಿಕೆ ಕೌನ್ಸಿಲಿಂಗ್ ವ್ಯಸನ ಮುಕ್ತ ಭವಿಷ್ಯ ಸಾಧಿಸಬಹುದು. ವಿಶೇಷವಾಗಿ ಯುವಕರು ವ್ಯಸನ ಮುಕ್ತ ಭವಿಷ್ಯ ಪಡೆಯುವಂತಾಗಬೇಕು’ ಎಂದು ಹೇಳಿದ್ದಾರೆ.