ಬೆಂಗಳೂರು: ಬ್ಯಾಂಕಾಕ್ ಪ್ರವಾಸದ ಸಂದರ್ಭ ಹೃದಯ ಸ್ತಂಭನದಿಂದ ಮೃತಪಟ್ಟ ಸ್ಪಂದನಾ ವಿಜಯ ರಾಘವೇಂದ್ರ ಅವರ ಪಾರ್ಥಿವ ಶರೀರವನ್ನು ಮಂಗಳವಾರ ಸಂಜೆಯ ವೇಳೆಗೆ ಆಸ್ಪತ್ರೆಯಿಂದ ಬಿಟ್ಟು ಕೊಡುವ ನಿರೀಕ್ಷೆ ಇದೆ.
ಪಾರ್ಥಿವ ಶರೀರ ಬೆಂಗಳೂರು ತಲುಪಲಿದ್ದು, ಬುಧವಾರ ಬೆಂಗಳೂರಿನಲ್ಲೇ ಅಂತ್ಯಕ್ರಿಯೆ ನಡೆಯಲಿದೆ.
ತಮ್ಮ ಕುಟುಂಬದ ಸೋದರ ಸಂಬಂಧಿಗಳ ಜತೆ ಎಂಟು ದಿನಗಳ ಹಿಂದೆ ಬ್ಯಾಂಕಾಕ್‌ಗೆ ತೆರಳಿದ್ದ ಸ್ಪಂದನಾ ಅವರು ಭಾನುವಾರ ಸಂಜೆ ಶಾಪಿಂಗ್ ಮುಗಿಸಿದ ಬಳಿಕ ಲೋ ಬಿಪಿಗೆ ಒಳಗಾಗಿ ಕುಸಿದುಬಿದ್ದಿದ್ದರು. ಈ ಮಾಹಿತಿ ಪಡೆದ ನಟ ವಿಜಯ ರಾಘವೇಂದ್ರ ಅವರು ತುರ್ತಾಗಿ ಬ್ಯಾಂಕಾಕ್‌ಗೆ ತೆರಳಿದ್ದರು. ಅವರು ತಲುಪುವ ಹೊತ್ತಿಗೆ ಸ್ಪಂದನಾ ಪ್ರಾಣಪಕ್ಷಿ ಹಾರಿ ಹೋಗಿತ್ತು. ಈ ನಡುವೆ ಅವರನ್ನು ಬ್ಯಾಂಕಾಕ್‌ನ ಕೆಸಿಎಂಎಚ್ ಹಾಸ್ಪಿಟಲ್ ಗೆ ಕರೆದುಕೊಂಡು ಹೋಗಲಾಗಿತ್ತು. ಸೋಮವಾರ ಸ್ಪಂದನಾ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆದಿದೆ.
ಮಂಗಳವಾರ ಮಲ್ಲೇಶ್ವರದ ನಿವಾಸದ ಬಳಿ ಮಾತನಾಡಿದ ಸ್ಪಂದನಾ ಅವರ ದೊಡ್ಡಪ್ಪ ಬಿ.ಕೆ. ಹರಿಪ್ರಸಾದ್ ಅವರು, ಬ್ಯಾಂಕಾಕ್‌ನಲ್ಲಿ ಮರಣೋತ್ತರ ಪರೀಕ್ಷೆ ಮುಕ್ತಾಯವಾಗಿದೆ. ಬ್ಯಾಂಕಾಕ್‌ನಲ್ಲಿ ಮೃತದೇಹದ ಹಸ್ತಾಂತರ ಪ್ರಕ್ರಿಯೆ ಮಧ್ಯಾಹ್ನ 1 ಗಂಟೆಗೆ ಮುಗಿಯಲಿದೆ ಎಂದು ತಿಳಿಸಿದರು.
ಬುಧವಾರ ಬೆಳಗ್ಗಿನಿಂದ ಮನೆಯ ಬಳಿ ಮೃತದೇಹದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಬಳಿಕ ಶ್ರೀರಾಂಪುರದ ಹರಿಶ್ಚಂದ್ರ ಘಾಟ್‌ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿಸಿದರು.