Saturday, 14th December 2024

ಆ.30ರಂದು ಶಿವಾನಂದ ಸರ್ಕಲ್ ಸ್ಟೀಲ್ ಬ್ರಿಡ್ಜ್ ಸಂಚಾರಕ್ಕೆ ಮುಕ್ತ

ಬೆಂಗಳೂರು: ಬಹು ನಿರೀಕ್ಷಿತ ಶಿವಾನಂದ ಸರ್ಕಲ್ ಸ್ಟೀಲ್ ಬ್ರಿಡ್ಜ್ ಕಾಮಗಾರಿ ಬಹುತೇಕ ಮುಕ್ತಾಯವಾಗಿದ್ದು, ಆ.30ರಂದು ಸಾರ್ವಜನಿಕರ ಓಡಾಟಕ್ಕೆ ಮುಕ್ತಗೊಳಿಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಎಂಜಿನಿಯರ್ ಲೋಕೇಶ್ ಮಾಹಿತಿ ನೀಡಿದ್ದಾರೆ.

ಆ.15ರಂದು ಶಿವಾನಂದ ಸರ್ಕಲ್ ಉಕ್ಕಿನ ಮೇಲ್ಸೇತುವೆ ಉದ್ಘಾಟನೆ ಮಾಡಲು ಬಿಬಿಎಂಪಿ ಗುರಿ ಹೊಂದಿತ್ತು, ಆದರೆ ಮಳೆ ಯಿಂದಾಗಿ ಕಾಮಗಾರಿಗೆ ಅಡ್ಡಿಯಾಗಿದ್ದು, ನಿಗದಿತ ವೇಳೆಗೆ ಕಾಮಗಾರಿ ಮುಗಿಸುವಲ್ಲಿ ಅಡ್ಡಿಯಾಗಿತ್ತು. ನಂತರ ಫ್ಲೈಓವರ್ ನ ಒಂದು ಭಾಗವನ್ನು ಸಾರ್ವಜನಿಕ ಓಡಾಟಕ್ಕೆ ತೆರೆಯಲಾಗಿತ್ತು.

ಆದರೆ, ಸಾರ್ವಜನಿಕರ ಓಡಾಟಕ್ಕೆ ಮುಕ್ತವಾದ ಒಂದು ವಾರದಲ್ಲೇ ಮತ್ತೆ ಸೇತುವೆ ಮೇಲೆ ಸಂಚಾರಕ್ಕೆ ನಿರ್ಬಂಧ ಹಾಕಲಾಗಿತ್ತು. ಫ್ಲೈಓವರ್‌ನ ಎರಡೂ ಬದಿಗಳಲ್ಲಿ ಬಿಬಿಎಂಪಿ ಬ್ಯಾರಿಕೇಡ್ ಹಾಕಿದ್ದಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿತ್ತು. ಅದರಲ್ಲೂ ಸೇತುವೆ ಕಾಮಗಾರಿ ಗುಣಮಟ್ಟ ಕಳಪೆಯಾಗಿದೆ ಎನ್ನುವ ಆರೋಪ ಕೂಡ ಕೇಳಿಬಂದಿದೆ.

ಬಿಬಿಎಂಪಿ ಕೂಡ ಕಾಮಗಾರಿಯಲ್ಲಿನ ಲೋಪ ದೋಷಗಳನ್ನು ಒಪ್ಪಿಕೊಂಡಿದ್ದು, ಕಾಮಗಾರಿಯ ಗುಣಮಟ್ಟದ ಬಗ್ಗೆ ಮೂರನೇ ವ್ಯಕ್ತಿಯಿಂದ ಪರಿಶೀಲನೆ ಮಾಡುವುದಾಗಿ ತಿಳಿಸಿದೆ.

ಎಲ್ಲವೂ ಬಿಬಿಎಂಪಿ ಲೆಕ್ಕಾಚಾರದಂತೆ ನಡೆದಿದ್ದರೆ ಆಗಸ್ಟ್ 15ರಂದು ಸ್ವಾತಂತ್ಯ್ರ ಸಂಭ್ರಮದ ದಿನದಂದು ಸ್ಟೀಲ್ ಬ್ರಿಡ್ಜ್ ಉದ್ಘಾಟನೆಯಾಗ ಬೇಕಾಗಿತ್ತು.

ಸ್ಟೀಲ್ ಬ್ರಿಡ್ಜ್ ಕಾಮಗಾರಿಗೆ ಅಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರ 2017 ರಲ್ಲಿ ಅಡಿಪಾಯ ಹಾಕಲಾಯಿತು. ಸೇತುವೆಯ ನಿರ್ಮಾಣವನ್ನು ಪೂರ್ಣ ಗೊಳಿಸಲು ಬಿಬಿಎಂಪಿ ಸುದೀರ್ಘ 5 ವರ್ಷ ಸಮಯ ತೆಗೆದುಕೊಂಡಿದೆ.

ಬಿಬಿಎಂಪಿ ಅಧಿಕಾರಿಗಳ ಪ್ರಕಾರ, ಉಕ್ಕಿನ ಸೇತುವೆ ಯೋಜನೆ ಪೂರ್ಣಗೊಂಡ ನಂತರ, ಶಿವಾನಂದ ಸರ್ಕಲ್ ಸಿಗ್ನಲ್‌ನಲ್ಲಿ ಸಿಲುಕಿಕೊಳ್ಳದೆ ಸುಲಭವಾಗಿ ಮೆಜೆಸ್ಟಿಕ್, ಚಾಲುಕ್ಯ ಸರ್ಕಲ್, ಮಲ್ಲೇಶ್ವರಂ ಮತ್ತು ವಿಧಾನಸೌಧದ ಕಡೆಗೆ ಸುಲಭವಾಗಿ ಸಂಚರಿಸಬಹುದಾಗಿದೆ.