ಬೆಂಗಳೂರು: ರೈಲು ಹಳಿ ಮೇಲೆ ತನ್ನಿಬ್ಬರು ಮಕ್ಕಳೊಂದಿಗೆ ಮಲಗಿ ಆತ್ಮಹತ್ಯೆ ಮಾಡಿಕೊಳ್ಳಲು ಹೊರಟ ಮಹಿಳೆಯನ್ನು ರೈಲ್ವೆ ರಕ್ಷಣಾ ಪಡೆ ಪೊಲೀಸರು ಕಾಪಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಬಳಿ ಚನ್ನಸಂದ್ರ ರೈಲು ನಿಲ್ದಾಣ ಬಳಿ ಘಟನೆ ನಡೆದಿದ್ದು ರೈಲು ಹಳಿ ಮೇಲೆ ಮಲಗಿದ್ದ ಮಹಿಳೆಯನ್ನು ರೈಲ್ವೆ ಪೊಲೀಸರು ತಕ್ಷಣವೇ ಹೋಗಿ ಮೇಲಕ್ಕೆತ್ತಿ ತಂದಿದ್ದರಿಂದ ಮೂರು ಜೀವಗಳು ಉಳಿದಿವೆ.
ಪತಿಯಿಂದ ಮಾನಸಿಕ ಹಿಂಸೆ, ಕಿರುಕುಳ ತಾಳಲಾರದೆ ಮಹಿಳೆ ತನ್ನಿಬ್ಬರು ಪುಟ್ಟ ಮಕ್ಕಳೊಂದಿಗೆ ಈ ಕೃತ್ಯಕ್ಕೆ ಇಳಿದಿದ್ದಳು ಎನ್ನಲಾಗಿದೆ.
ಸ್ವಾತಂತ್ರ್ಯ ದಿನಾಚರಣೆಯಂದು ಸಾಯಂಕಾಲ ಮುಂಬೈಯ ಛತ್ರಪತಿ ಶಿವಾಜಿ ಟರ್ಮಿನಲ್ ನಿಂದ ತಿರುವನಂತಪುರ ಕೇಂದ್ರ ನಿಲ್ದಾಣಕ್ಕೆ ರೈಲು ಪ್ರಯಾಣಿಸುತ್ತಿತ್ತು. ಬೆಂಗಳೂರು ರೈಲ್ವೆ ವಲಯದ ಚನ್ನಸಂದ್ರ ನಿಲ್ದಾಣ ಬಳಿ ರೈಲು ಆಗಮಿಸುತ್ತಿತ್ತು.
ಚನ್ನಸಂದ್ರ ಕ್ರಾಸ್ ದಾಟುವ ಸ್ವಲ್ಪ ಹೊತ್ತಿನ ಮೊದಲು ಮಹಿಳೆ ತನ್ನಿಬ್ಬರು ಪುಟ್ಟ ಮಕ್ಕಳನ್ನು ಕರೆದುಕೊಂಡು ಹೋಗಿ ರೈಲು ಹಳಿಯ ಮೇಲೆ ಮಲಗಿದ್ದಾಳೆ. ಆ ವೇಳೆ ಗಸ್ತು ತಿರುಗುತ್ತಿದ್ದ ಆರ್ ಪಿಎಫ್ ಇನ್ಸ್ ಪೆಕ್ಟರ್ ವಿ ಎನ್ ಚಂಬಣ್ಣ ಮಹಿಳೆಯನ್ನು ಕಂಡು ರೈಲು ಬರುತ್ತಿರುವುದನ್ನು ಗಮನಿಸಿ, ಕೂಡಲೇ ಮಹಿಳೆಯನ್ನು ಎಳೆದು ಪ್ರಾಣ ಕಾಪಾಡಿದರು.