Friday, 22nd November 2024

ಬಿಜೆಪಿ ಹಾಗೂ ಶೆಟ್ಟರ್, ಕಾರಜೋಳರ ಎದೆಯಲ್ಲಿದ್ದಾರೆ ಅನುಮಾನವಿದ್ದರೆ ಎದೆ ಬಗೆದು ನೋಡಿ

ಬೆಂಗಳೂರು: ಟಿಪ್ಪು ಸುಲ್ತಾನ್ ನಮ್ಮ ಮೈಮೇಲಷ್ಟೇ ಅಲ್ಲ, ಬಿಜೆಪಿ ಹಾಗೂ ಶೆಟ್ಟರ್, ಕಾರಜೋಳರ ಎದೆಯಲ್ಲಿದ್ದಾರೆ ಅನುಮಾನವಿದ್ದರೆ ಎದೆ ಬಗೆದು ನೋಡಿ ಆರ್ ಅಶೋಕ್ ಅವರೇ ಎಂದು ಪರಿಷತ್‌ ವಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ಹೇಳಿದ್ದಾರೆ.

ಪಠ್ಯ ಪುಸ್ತಕದಲ್ಲಿ ಉದ್ದೇಶಪೂರ್ವಕವಾಗಿ ನಾಡಿನ ಸಾಂಸ್ಕೃತಿಕ ನಾಯಕರಿಗೆ ಬಿಜೆಪಿ ಸರ್ಕಾರ ಮಾಡಿರುವ ಘನಘೋರ ಅಪರಾಧಗಳಿಂದ ತಪ್ಪಿಸಿಕೊಳ್ಳಲು ಹೆಣಗಾಡುತ್ತಿದೆ. ಟಿಪ್ಪು ಸುಲ್ತಾನರ ವಿಷಯವನ್ನ ಮತ್ತೆ ಮುನ್ನಲೆಗೆ ತಂದು ವಿಷಯವನ್ನ ಡೈವರ್ಟ್ ಮಾಡಲು ಸಚಿವ ಆರ್ ಅಶೋಕ ಪ್ರಯತ್ನಿಸುತ್ತಿದ್ದಾರೆ. ಹೀಗಾಗಿಯೇ ಟಿಪ್ಪು ಸುಲ್ತಾನ್ ಎಂದರೆ ಸಿದ್ರಾಮಯ್ಯನವರಿಗೆ ಮೈಮೇಲೆ ಬಂದವರಂತೆ ಆಡುತ್ತಾರೆ ಎಂದಿದ್ದಾರೆ.

ಕಂದಾಯ ಸಚಿವ ಆರ್ ಅಶೋಕ್ ಅವರೇ ಈ ಫೋಟೋ ನೆನಪಿದ್ಯಾ? ಇದು ಟಿಪ್ಪುವಿನ ಪೋಷಕು ಧರಿಸಿ ಆಗಿನ ಸಿಎಂ ಶೆಟ್ಟರ್ ಜೊತೆಗೆ ಪೋಸ್ ನೀಡಿದವರು ತಾವೇ ಅಲ್ಲವೇ? ಆಗ ಮೈಮೇಲಷ್ಟೆಯಲ್ಲ, ತಲೆ ಮೇಲೆ ಹೊತ್ತು ಮೆರೆಸಿದ್ದನ್ನ ಮರೆತಿದ್ದೀರಾ? ಇತಿಹಾಸ ದಾಖಲೆ ಸಮೇತ ಸುಳ್ಳನ್ನ ಬೆತ್ತಲೆ ಮಾಡಿ ಬಿಡುತ್ತೆ ಹುಶಾರ್…!

ಟಿಪ್ಪು ಸುಲ್ತಾನರಿಗೆ ವೀರಾಧಿವೀರ, ಶೂರಾಧಿ ಶೂರ, ಮಹಾನ್ ಪರಾಕ್ರಮಿ, “ಮೈಸೂರಿನ ಹುಲಿ” ಎಂಬ ಬಿರುದುಗಳನ್ನ ಕಾಂಗ್ರೆಸ್ ಪಕ್ಷ ನೀಡಿದ್ದಲ್ಲ ಸ್ವಾಮಿ ಇತಿಹಾಸಕಾರರು. ಅದನ್ನ ಎಥಾವತ್ತು ಟಿಪ್ಪುವಿನ ಪರಾಕ್ರಮವನ್ನ, ಧೈರ್ಯ, ಸಾಹಸ, ದೇಶಪ್ರೇಮದ ಕಥನಗಳನ್ನ 425 ಪುಟಗಳ ಪುಸ್ತಕವನ್ನ ಪ್ರಕಟಿಸಿದ್ದು ಬಿಜೆಪಿ ಸರ್ಕಾರ ಎಂಬುದು ಅಷ್ಟು ಬೇಗ ಮರೆತು ಹೋಯಿತಾ? ಪುಸ್ತಕದ ಮುನ್ನುಡಿಯಲ್ಲಿ 2012-13ರಲ್ಲಿ ಸಿಎಂ ಆಗಿದ್ದ ಜಗದೀಶ್ ಶೆಟ್ಟರ್ ಹಾಗೂ ಕನ್ನಡ ಸಂಸ್ಕೃತಿ ಸಚಿವ ರಾಗಿದ್ದ ಗೋವಿಂದ ಕಾರ ಜೋಳರು ಪುಸ್ತಕದಲ್ಲಿ ಬರೆದಿರುವ ಮುನ್ನಡಿಯನ್ನ ಕೋಮುವಾದದ ಕನ್ನಡಕ ತೆಗೆದು ಓದಿ.

“ಕರ್ನಾಟಕ ಇತಿಹಾಸದಲ್ಲಿ 1782-1799ರ ನಡುವಿನ ಅವಧಿಯು ವಿಶಿಷ್ಟವಾದದ್ದು. ಈ ಅವಧಿಯಲ್ಲಿ ಮೈಸೂರು ಸಾಮ್ರಾಜ್ಯ ಟಿಪ್ಪು ಸುಲ್ತಾನನ ಆಡಳಿತಕ್ಕೆ ಒಳಪಟ್ಟಿತ್ತು. ಏಕಾಂಗಿಯಾಗಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ವಿರುದ್ಧ ತೀವ್ರವಾಗಿ ಹೋರಾಡಿ, ಅವರಿಗೆ ಸೋಲಿನ ರುಚಿಯನ್ನು ತೋರಿಸುವಲ್ಲೂ ಯಶಸ್ವಿಯಾಗಿದ್ದ. ಅದು ಕೂಡಾ ಒಂದು ಬಾರಿ ಅಲ್ಲ, ಎರಡು ಬಾರಿ. ಅದಾಗ್ಯೂ ನಾಲ್ಕನೇ ಆಂಗ್ಲೋ- ಮೈಸೂರು ಯುದ್ಧದಲ್ಲಿ ಬ್ರಿಟಿಷರ ವಿರುದ್ಧ ಕೊನೆಯವರೆಗೂ ಹೋರಾಡಿ ರಣರಂಗ ದಲ್ಲೇ ವೀರಮರಣವನ್ನಪ್ಪಿದ. ಈ ವಾಕ್ಯಗಳನ್ನ ಸರ್ಕಾರವೇ ಪ್ರಕಟಿಸಿದ ಪುಸ್ತಕದಲ್ಲಿ ಸಚಿವ ಗೋವಿಂದ ಕಾರಜೋಳ ಅವರು ಮುನ್ನುಡಿಯಲ್ಲಿ ಬರೆದಿದ್ದಾರೆ. ಪುಸ್ತಕ ಖಾಲಿಯಾಗಿದ್ದರೆ ಇನ್ನೊಮ್ಮೆ ಪ್ರಕಟಿಸಿ ತೊಂದರೆ ಇಲ್ಲ. ಇತಿಹಾಸದ ಅರಿವು ನಿಮಗೆ ತೀರಾ ಅಗತ್ಯವಿದೆ.

ಬಿಜೆಪಿಯವರು ಇತ್ತೀಚೆಗೆ ಇತಿಹಾಸ ಅಷ್ಟೇ ಬದಲಾಯಿಸುತ್ತಿಲ್ಲ, ತಾವೇ ಹೇಳಿದ್ದ ಹೇಳಿಕೆಗಳನ್ನ , ಪ್ರಕಟಿಸಿದ್ದ ಪುಸ್ತಕಗಳ ಬಗ್ಗೆಯೂ ಸುಳ್ಳನ್ನ ಹೇಳಲು ಆರಂಭಿಸಿದ್ದಾರೆ. ಬಹುಶಃ ವಾಟ್ಸಪ್ ಯುನಿವರ್ಸಿಟಿಯ ಪ್ರಾರಂಭ ಆಗಿದ್ದು 2014ರಲ್ಲಿ, ಜಗದೀಶ್ ಶೆಟ್ಟರ್ ಸಿಎಂ ಆಗಿದ್ದು 2012-13ರಲ್ಲಿ. ಹೀಗಾಗಿ 2014 ಮೊದಲ ಎಲ್ಲಾ ಇತಿಹಾಸವೂ ಬಿಜೆಪಿಗೆ ಸುಳ್ಳಂತೆ ಭಾವಿಸುತ್ತಿದೆ. ಇತ್ತೀಚೆಗೆ ಕೋಟ ಶ್ರೀನಿವಾಸ್ ಪೂಜಾರಿಯವರು ಕೂಡ ವಾಟ್ಸಪ್ ಮಾಹಿತಿ ಹಾಕಿ ತಮ್ಮ ಇತಿಹಾಸ ತಿಳುವಳಿಕೆಯನ್ನ ಜಗಜ್ಜಾಹೀರು ಮಾಡಿಕೊಂಡಿದ್ದಾರೆ.

ಶಿಕ್ಷಣ ಇಲಾಖೆಯಲ್ಲಿ ಪಠ್ಯ ಪರಿಷ್ಕರಣೆ ಹೆಸರಿನಲ್ಲಿ ನಡೆದಿರುವ ಪ್ರಮಾದಗಳಿಗೆ ಉತ್ತರ ಕೊಡಲು ಶಿಕ್ಷಣ ಸಚಿವರು ಅಸಮರ್ಥರು ಎಂಬುದನ್ನ ಸಾಬೀತು ಮಾಡಿದ್ದಾರೆ. ಶಿಕ್ಷಣ ಕ್ಷೇತ್ರದ ಬಗ್ಗೆ ಕಂದಾಯ ಸಚಿವರು ಉತ್ತರ ನೀಡುತ್ತಿರುವುದು ಸಂದೇಶವೇನು? ಮಾಜಿ ಪ್ರಧಾನಿ ದೇವೇಗೌಡರಾದಿಯಾಗಿ, ಈ ನಾಡಿನ ಶಿಕ್ಷಣ ಪ್ರೇಮಿಗಳು, ಸಾಹಿತಿ ಚಿಂತಕರು, ಸ್ವಾಮೀಜಿಗಳು ಮುಖ್ಯಮಂತ್ರಿ ಗಳಿಗೆ ಹಾಗೂ ಶಿಕ್ಷಣ ಸಚಿವರಿಗೆ ಪತ್ರ ಬರೆಯುತ್ತಲೇ ಇದ್ದಾರೆ. ಕನಿಷ್ಠ ಸೌಜನ್ಯಕ್ಕೂ ಸಿಎಂ ಸಭೆ ಕರೆದು ಸ್ಪಷ್ಟಿಕರಣ ನೀಡಲು ಸಾಧ್ಯವಾಗುತ್ತಿಲ್ಲ. ಇದು ಪ್ರಜಾಪ್ರಭುತ್ವ ನಡೆಯಲ್ಲ. ಈಗಲು ಕಾಲ ಮಿಂಚಿಲ್ಲ, ಕೂಡಲೇ ಅವಿವೇಕಿಯೊಬ್ಬ ಮಾತ್ರ ಮಾಡಿರುವ ಪಠ್ಯ ಪರಿಷ್ಕರಣೆಯನ್ನ ರದ್ದುಗೊಳಿಸಿ, ಕೂಡಲೇ ಹಿಂದಿನ ಪಠ್ಯ ಪುಸ್ತಕವನ್ನೇ ಭೋದಿಸಲು ಅವಕಾಶ ಮಾಡಿಕೊಡಿಬೇಕೆಂದು ಒತ್ತಾಯಿಸುತ್ತೇನೆ..