Sunday, 15th December 2024

ರೈಲು ಪ್ರಯಾಣ ದರಗಳಲ್ಲಿ ಇಳಿಕೆ

ಬೆಂಗಳೂರು: ಭಾರತೀಯ ರೈಲ್ವೇಸ್ ತನ್ನ ಕೆಲ ರೈಲು ಪ್ರಯಾಣ ದರಗಳನ್ನು ಗಣನೀಯವಾಗಿ ಇಳಿಕೆ ಮಾಡಿದೆ.

ಎಲ್ಲಾ ರೈಲುಗಳ ಎಸಿ ಚೇರ್ ಕಾರ್ ಮತ್ತು ಎಕ್ಸಿಕ್ಯೂಟಿವ್ ಕ್ಲಾಸ್ ಬೋಗಿಗಳಲ್ಲಿ ಪ್ರಯಾಣ ದರಗಳನ್ನು ಕಡಿಮೆಗೊಳಿಸಿದೆ. ಅನುಭೂತಿ ಮತ್ತು ವಿಸ್ತಾಡೋಮ್ ಕೋಚ್​ಗಳಲ್ಲಿ ಶೇ . 25 ರವರೆಗೂ ಟಿಕೆಟ್ ಬೆಲೆ ಇಳಿಸಲಾಗಿದೆ . ಜನರ ಟಿಕೆಟ್​ಗಳಿಗೆ ಇರುವ ಬೇಡಿಕೆಗೆ ಅನುಸಾರವಾಗಿ ಟಿಕೆಟ್ ಬೆಲೆ ಇಳಿಕೆ ಪ್ರಮಾಣ ಇರಲಿದೆ ಎದು ರೈಲ್ವೆ ಬೋರ್ಡ್ ಸ್ಪಷ್ಟಪಡಿಸಿದೆ .

‘ಮೂಲ ದರದ ಶೇ. 25ರವರೆಗೂ ಡಿಸ್ಕೌಂಟ್ ಇರುತ್ತದೆ. ರಿಸರ್ವೇಶನ್ ಶುಲ್ಕ, ಸೂಪರ್ ಫಾಸ್ಟ್ ಸರ್​ಚಾರ್ಜ್, ಜಿಎಸ್​ಟಿ ಇತ್ಯಾದಿ ದರ ಪ್ರತ್ಯೇಕವಾಗಿರುತ್ತದೆ. ರೈಲಿನಲ್ಲಿ ಪ್ರಯಾ ಣಿಕರ ಸಂಖ್ಯೆಗೆ ಅನುಗುಣವಾಗಿ ಡಿಸ್ಕೌಂಟ್ ನೀಡಲಾಗುತ್ತದೆ’ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಎಸಿ ಸೀಟುಗಳಿಗೆ ದರ ರಿಯಾಯಿತಿ ಯೋಜನೆಯನ್ನು ನಿಗದಿ ಮಾಡುವ ಅಧಿಕಾರವನ್ನು ವಿವಿಧ ರೈಲ್ವೆ ವಲಯಗಳ ಚೀಫ್ ಕಮರ್ಷಿಯಲ್ ಮ್ಯಾನೇಜರುಗಳಿಗೆ ವಹಿಸಲು ರೈಲ್ವೆ ಸಚಿವಾಲಯ ನಿರ್ಧರಿಸಿದೆ.

ಎಸಿ ಬೋಗಿಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಆಗಿದ್ದು, ಅಲ್ಲಿಗೆ ಜನರನ್ನು ಸೆಳೆಯಲು ರೈಲ್ವೆ ಇಲಾಖೆ ರಿಯಾಯಿತಿ ದರದ ಅಸ್ತ್ರ ಬಳಸುತ್ತಿದೆ. ‘ಕಳೆದ 30 ದಿನದಲ್ಲಿ ಶೇ. 50ಕ್ಕಿಂತಲೂ ಕಡಿಮೆ ಭರ್ತಿಯಾಗಿರುವ ದರ್ಜೆಗಳಿಗೆ ರಿಯಾಯಿತಿ ಒದಗಿಸಲು ಪರಿಗಣಿಸಲಾಗುತ್ತದೆ’ ಎಂದು ರೈಲು ಬೋರ್ಡ್ ತಿಳಿಸಿದೆ.