ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಆಗಮಿಸುವುದಕ್ಕೂ ಮುನ್ನ ಬಿಬಿಎಂಪಿ 23ಕೋಟಿ ರೂ. ವೆಚ್ಚದಲ್ಲಿ ಮಾಡಿದ್ದ ಕಾಮಗಾರಿ ಕಳಪೆಯಾಗಿರುವ ಕಾರಣಕ್ಕೆ ಇಬ್ಬರು ಎಂಜಿನಿಯರ್ಗಳನ್ನು ಶುಕ್ರವಾರ ಅಮಾನತು ಗೊಳಿಸಲಾಗಿದೆ.
ಕಳಪೆ ಕಾಮಗಾರಿಗೆ ಪರಿಶೀಲಿಸಿದ ಅಧಿಕಾರಿಗಳಿಂದ ಬಿಬಿಎಂಪಿಗೆ ವರದಿ ಸಲ್ಲಿಕೆಯಾಗಿದ್ದು, ಕಳಪೆಗೆ ಕಾರಣರಾದ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಎ.ರವಿ ಮತ್ತು ಸಹಾಯಕ ಅಭಿಯಂತರ ಐ.ಕೆ.ವಿಶ್ವಾಸ ಅವರನ್ನು ಸೇವೆಯಿಂದ ಅಮಾ ನತು ಮಾಡಿ ಬಿಬಿಎಂಪಿ ಆಡಳಿತ ವಿಭಾಗದಿಂದ ಆದೇಶ ಹೊರಡಿಸಲಾಗಿದೆ.
ರಸ್ತೆಗಳಿಗೆ 40 ಎಂಎಂ ಡಾಂಬರು ಮಾಡಬೇಕಿದ್ದ ಜಾಗದಲ್ಲಿ 30 ಎಂಎಂ ಡಾಂಬರೀಕರಣ ಮಾಡಿದ್ದೇ ಕಳಪೆಗೆ ಕಾರಣವಾಗಿದೆ ಎಂಬುದು ಅಧಿಕಾರಿಗಳ ತನಿಖೆಯಿಂದ ತಿಳಿದು ಬಂದಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಜೂನ್ 20ರಂದು ಬೆಂಗಳೂರಿಗೆ ಪ್ರವಾಸ ಕೈ ಗೊಂಡಿದ್ದರು. ಕರ್ನಾಟಕದಲ್ಲಿ ಎರಡು ದಿನ ಇದ್ದ ಪ್ರಧಾನಿ ವಿವಿಧ ಅಭಿವೃದ್ಧಿ ಕಾಮಗಾರಿ ಗಳಿಗೆ ಚಾಲನೆ ನೀಡಿದ್ದರು.
ಪ್ರಧಾನಿ ಆಗಮನ ಹಿನ್ನೆಲೆಯಲ್ಲಿ ವಿವಿಧ ರಸ್ತೆಗಳನ್ನು ಬಿಬಿಎಂಪಿ 23ಕೋಟಿ ರೂ. ಖರ್ಚು ಮಾಡಿ ಡಾಂಬರು ಮಾಡಿತ್ತು. ಆ ಕಾಮಗಾರಿ ಕಳಪೆಯಾಗಿದೆ ಎಂಬ ವಿಡಿಯೋ ಹರಿದಾಡುತ್ತಿದ್ದಂತೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ರಸ್ತೆ ಕಾಮಗಾರಿ ಕುರಿತು ವರದಿ ಕೇಳಿತ್ತು. ಇದಾದ ಬಳಿಕ ರಸ್ತೆ ಕಾಮಗಾರಿ ರಾಷ್ಟ್ರಮಟ್ಟದಲ್ಲಿ ಸುದ್ದಿಯೂ ಆಗಿತ್ತು.