Sunday, 15th December 2024

Viral News: “ವರ್ಜಿನ್‌ ಆಗಿರ್ಲಿ, ಇಲ್ಲದಿರಲಿ…ʼʼ ಏನರ್ಥ ಈ ಸ್ಲೋಗನ್‌ದು? ಚರ್ಚೆ ಹುಟ್ಟುಹಾಕಿದ ಆಟೋ ಬರಹ!

auto slogan

ಬೆಂಗಳೂರು: ಆಟೋಗಳ ಹಿಂಭಾಗ- ಮುಂಭಾಗದಲ್ಲಿರುವ ಸ್ಲೋಗನ್‌ಗಳು (Auto Slogan) ಕೆಲವೊಮ್ಮೆ ನಗೆ ಉಕ್ಕಿಸುವಂತಿದ್ದರೆ, ಕೆಲವೊಮ್ಮೆ ಯೋಚನೆಗೆ ಹಚ್ಚುತ್ತವೆ. ಇನ್ನು ಕೆಲವೊಮ್ಮೆ ಉಚಿತ ಫಿಲಾಸಫಿ ಹಂಚುತ್ತವೆ. ಸದ್ಯ ಬೆಂಗಳೂರಿನ (Bengaluru news, Bangalore news) ರಸ್ತೆಯಲ್ಲಿ ಓಡಾಡುತ್ತಿರುವ ಆಟೋದ ಹಿಂಬದಿಯ ಬರಹ ಜಾಲತಾಣಗಳಲ್ಲಿ ಸ್ವಾರಸ್ಯಕರ ಚರ್ಚೆಗೆ (Viral News) ಕಾರಣವಾಗಿದೆ.

ಆಟೋ ಡ್ರೈವರ್‌ ಒಬ್ಬರು ತಮ್ಮ ಆಟೋ ಹಿಂಭಾಗದಲ್ಲಿ ಒಂದು ಸ್ಲೋಗನ್‌ ಹಾಕಿಕೊಂಡಿದ್ದಾರೆ. ಅದು ಹೀಗಿದೆ: “ತೆಳ್ಳಗಿರಲಿ ದಪ್ಪವಾಗಿರಲಿ, ಕಪ್ಪಗಿರಲಿ ಬೆಳ್ಳಗಿರಲಿ, ಕನ್ಯೆಯಾಗಿರಲಿ ಅಲ್ಲದಿರಲಿ, ಎಲ್ಲ ಮಹಿಳೆಯರೂ ಗೌರವಕ್ಕೆ ಅರ್ಹರು.” (“Slim or fat, black or white, virgin or not. All girls deserve respect”). ಈ ಸ್ಲೋಗನ್‌ ಫೋಟೋವನ್ನು ʼರಿಟೈರ್ಡ್‌ ಸ್ಪೋರ್ಟ್ಸ್‌ ಫ್ಯಾನ್‌ʼ ಎಂಬ ಖಾತೆಯಲ್ಲಿ ಎಕ್ಸ್‌ನಲ್ಲಿ ಶೇರ್‌ ಮಾಡಿದ್ದಾರೆ. “ಬೆಂಗಳೂರಿನ ರಸ್ತೆಯಲ್ಲಿ ಕಟ್ಟರ್‌ ಸ್ತ್ರೀವಾದ” ಎಂದು ಕ್ಯಾಪ್ಷನ್‌ ಹಾಕಿದ್ದಾರೆ.

ಇದು ಹಲವರಿಗೆ ಕಚಗುಳಿ ಇಟ್ಟರೆ, ಇನ್ನು ಹಲವರನ್ನು ರೊಚ್ಚಿಗೆಬ್ಬಿಸಿದೆ. ಇದು ಸ್ತ್ರೀಯರಿಗೆ ಬಲ ತುಂಬುವಂಥದ್ದು ಎಂದು ಕೆಲವರು ಹೇಳಿದರೆ, ಹಾಗಲ್ಲ ಅದು ಪ್ರಚೋದನಕಾರಿ ಎಂಬುದು ಇನ್ನು ಕೆಲವರ ಮಾತು. “ಇದೇನೂ ವಿಚಾರ ಪ್ರಚೋದಕ ಅಲ್ಲ” ಎಂಬುದು ಬೇರೊಬ್ಬರ ಮಾತು. “ಇದಕ್ಕಿಂತ ಕಳಪೆ ಸ್ಲೋಗನ್‌ಗಳನ್ನು ನೋಡಿದ್ದೇವೆ” ಎಂದು ಮತ್ತೊಬ್ಬರು ಬರೆದು ಮತ್ತೊಂದು ಸ್ಲೋಗನ್‌ ಫೋಟೋ ಹಾಕಿದ್ದಾರೆ.

“ಇದು ಗೌರವ ಅಲ್ಲ, ಬೇಜಾರಿನಿಂದ ಬರೆದ ಹಾಗಿದೆ. ಇದು ಇಂದಿನ ಮಹಿಳಾವಾದದ ಸ್ಥಿತಿಯನ್ನು ಸಾರುತ್ತೆ” ಅಂತ ಒಬ್ಬರು ಬರೆದಿದಾರೆ. “ಈ ಥರ ರೆಸ್ಪೆಕ್ಟ್‌ ವುಮನ್‌ ಅಂಥ ಜಾಸ್ತಿ ಶೋ ಮಾಡುವವರೇ ನಿಜಜೀವನದಲ್ಲಿ ಮಹಿಳೆಯರ ಮೇಲೆ ಜಾಸ್ತಿ ಕ್ರೌರ್ಯ ತೋರಿಸೋದು” ಎಂದು ಇನ್ನೊಬ್ಬರು. “ಇದು ಇಂದಿನ ಪುರುಷರ ಮನಸ್ಥಿತಿ” ಎಂದು ಇನ್ನೊಬ್ಬರು ವ್ಯಂಗ್ಯವಾಡಿದ್ದಾರೆ.

“ಇದೇನೂ ನಿಜವಾದ ಫೆಮಿನಿಸಂ ಅಲ್ಲ. ವರ್ಜಿನ್‌ ಅಂತ ಬರೆಯುವ ಬದಲು ವಿವಾಹಿತೆ ಅಥವಾ ಅವಿವಾಹಿತೆ ಅಂತ ಬರೀಬಹುದಾಗಿತ್ತು. ಕಡೇ ಪಕ್ಷ ಆಟೋ ಡ್ರೈವರ್‌ ಮಹಿಳೆಯರನ್ನು ಗೌರವಿಸ್ತಾರೆ” ಎಂದವರು ಒಬ್ಬರು. “ಲವ್‌ಲಿ ಮೆಸೇಜ್.‌ ಜನ ಇದನ್ನು ಫಾಲೋ ಮಾಡಬೇಕು” ಅಂತ ಬೇರೊಬ್ಬರು. ಮತ್ತೊಬ್ಬರು ಸಿಟ್ಟಿಗೆದ್ದು, “ಕೆಲವರು ನಿಜಕ್ಕೂ ಸರಿಯಿಲ್ಲ. ಬೇರೊಬ್ಬರ ಮೈತೂಕ, ಬಣ್ಣ, ವರ್ಜಿನಿಟಿ ಮೇಲೆ ಅವರ ಗೌರವ ನಿರ್ಧರಿಸೋಕೆ ಇವರ್ಯಾರು” ಎಂದು ಗರ್ಜಿಸಿದ್ದಾರೆ.

ಇದನ್ನೂ ಓದಿ: ‌Virat Kohli: ಬೆಂಗಾಳಿ ಮಾತನಾಡಿದ ವಿರಾಟ್‌ ಕೊಹ್ಲಿ; ವಿಡಿಯೊ ವೈರಲ್