ಬೆಂಗಳೂರು: ಕಳೆದೆರಡು ದಿನಗಳಿಂದ ಇಂಟರ್‌ನೆಟ್‌ನಲ್ಲಿ ಒಂದು ವಿಡಿಯೋ ವೈರಲ್ (Viral video) ಆಗುತ್ತಿದೆ. ಅದರಲ್ಲಿ, ಬೆಂಗಳೂರಿನ ಮುನ್ನೇಕೊಳಲು ರೈಲ್ವೇ ಗೇಟ್‌ನಲ್ಲಿ (Railway crossing) ವಾಹನಗಳು ಜಾಮ್ (Traffic jam) ಆಗಿ ಪರದಾಡುತ್ತಿವೆ. ಒಂದು ರೈಲು ʼಕೂʼ ಎಂದು ಅಬ್ಬರಿಸುತ್ತ ಈ ವಾಹನಗಳಿಗೆ ದಾರಿ ಬಿಟ್ಟು ನಿಂತುಕೊಂಡಿದೆ. ಇದನ್ನು ನೋಡಿ ನೆಟಿಜೆನ್‌ಗಳು ಸಿಕ್ಕಾಪಟ್ಟೆ ನಕ್ಕಿದ್ದಾರೆ. “ಇದು ಬೆಂಗಳೂರಿನ (bangalore news) ಟ್ರಾಫಿಕ್ ದುಃಸ್ಥಿತಿ. ಇಲ್ಲಿ ರೈಲು ಕೂಡ ಟ್ರಾಫಿಕ್ ಜಾಮ್‌ನಲ್ಲಿ ಕಾಯಲೇಬೇಕು” ಎಂದು ಸುಮಾರು ಮಂದಿ ಕಾಮೆಂಟ್ ಮಾಡಿದ್ದರು.
ಮೇಲ್ನೋಟಕ್ಕೆ ಇದು ರೈಲಿನ ದಾರಿಯನ್ನು ವಾಹನಗಳು ಬ್ಲಾಕ್ ಮಾಡಿದ ಹಾಗೇ, ರೈಲ್ವೆ ಕ್ರಾಸಿಂಗ್‌ನಲ್ಲಿ ವಾಹನಗಳ ನಡುವೆ ದಾರಿ ತೋಚದೆ ರೈಲು ನಿಂತ ಹಾಗೆ ಕಾಣಿಸಿದೆ. ಈ ಘಟನೆ ನಡೆದಿರುವುದು ಮುನ್ನೆಕೊಳಲು ರೈಲ್ವೆ ಕ್ರಾಸಿಂಗ್‌ನಲ್ಲಿ. ಇಲ್ಲಿ ಸದಾ ಟ್ರಾಫಿಕ್ ಸಮಸ್ಯೆ ಎಂದು ಬೆಂಗಳೂರಿನ ನೆಟಿಜನ್‌ಗಳು ದೂರಿದ್ದಾರೆ. ಸುಧೀರ್ ಚಕ್ರವರ್ತಿ ಎಂಬವರು ಈದರ ವಿಡಿಯೋವನ್ನು ಇನ್‌ಸ್ಟಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದರು. ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಹಿಟ್ ಆಗಿತ್ತು. ಇದು ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯ ಬಗ್ಗೆಯೂ ಗಮನ ಸೆಳೆದಿತ್ತು.
ನಿಜಕ್ಕೂ ನಡೆದದ್ದೇನು ಎಂಬುದು ಕುತೂಹಲಕಾರಿ. ರೈಲ್ವೇ ಅಧಿಕಾರಿಗಳು ತಿಳಿಸುವ ಪ್ರಕಾರ ಇದು ಟ್ರಾಫಿಕ್ ಜಾಮ್‌ಗೆ ಬೆದರಿ ರೈಲು ನಿಂತಿದ್ದಲ್ಲ. ರೈಲು ಕ್ರಾಸಿಂಗ್ ಬಳಿ ಬಂದಾಗ ಲೊಕೊಪೈಲಟ್‌ಗೆ ದೊಡ್ಡದೊಂದು ಸೌಂಡ್ ಕೇಳಿಸಿದೆ. ಇದೇನು ಶಬ್ದ, ಅಪಾಯಕಾರಿಯೋ ಅಲ್ಲವೋ ಎಂದು ಪರಿಶೀಲಿಸಲು ರೈಲನ್ನು ನಿಲ್ಲಿಸಿ ಲೊಕೊಪೈಲಟ್, ಅಸಿಸ್ಟೆಂಟ್ ಲೊಕೊಪೈಲಟ್ ಹಾಗೂ ಟ್ರೇನ್ ಮ್ಯಾನೇಜರ್ ಇಳಿದಿದ್ದಾರೆ. ಇದು ರೈಲಿನ ಸುರಕ್ಷತೆ ಖಾತ್ರಿಪಡಿಸಿಕೊಳ್ಳಲು ಲೊಕೊಪೈಲಟ್ ಕೈಗೊಂಡ ಒಂದು ಸುರಕ್ಷತಾ ಕ್ರಮ ಆಗಿತ್ತು.
ರೈಲು ನಿಂತು ಪರಿಶೀಲನೆ ನಡೆಯುತ್ತಿದ್ದ ಹೊತ್ತಿನಲ್ಲಿ ರಸ್ತೆಯಲ್ಲಿ ಅನಗತ್ಯ ಟ್ರಾಫಿಕ್ ವಿಳಂಬ ಆಗುವುದನ್ನು ತಪ್ಪಿಸಲು ಗೇಟ್‌ಮ್ಯಾನ್ ಗೇಟ್‌ಗಳನ್ನು ತೆರೆದು ವಾಹನಗಳಿಗೆ ತೆರಳಲು ಅವಕಾಶ ಮಾಡಿಕೊಟ್ಟಿದ್ದ. ಆ ಸಂದರ್ಭದಲ್ಲಿ ತೆಗೆದ ವಿಡಿಯೊ ಇದಾಗಿದೆ.
ನೆಟಿಜನ್‌ಗಳು ಮಾತ್ರ ಈ ವಿಡಿಯೋವನ್ನು, ಬೆಂಗಳೂರಿನ ಟ್ರಾಫಿಕ್ ವ್ಯವಸ್ಥೆಯನ್ನು ಟ್ರೋಲ್ ಮಾಡುವುದಕ್ಕೆ ಚೆನ್ನಾಗಿಯೇ ಬಳಸಿಕೊಂಡಿದ್ದಾರೆ. ಕೆಲವರು ಜೋಕ್ ಮಾಡಿದ್ದರೆ, ಇನ್ನು ಹಲವರು ಒಟ್ಟಾರೆ ಟ್ರಾಫಿಕ್ ಸ್ಥಿತಿಗತಿಯ ಬಗ್ಗೆ ಸಿಟ್ಟಾಗಿದ್ದಾರೆ. ಮುನ್ನೇಕೊಳಲು ಕ್ರಾಸಿಂಗ್‌ನಲ್ಲಿ ದಿನನಿತ್ಯ ಓಡಾಡುವವರು ತಮ್ಮ ನಿತ್ಯದ ಗೋಳನ್ನು ತೋಡಿಕೊಂಡಿದ್ದಾರೆ.
“ನೀವು ಕ್ರಾಸಿಂಗ್ ಮಾಡುವಾಗ ನಾವು ಯಾವಾಗಲೂ ಕಾಯುತ್ತಿರುತ್ತೇವೆ. ಈಗ ನಾವು ದಾಟುವಾಗ ನೀವು ಕಾಯಿರಿ” ಎಂದು ಒಬ್ಬರು ರೈಲ್ವೆ ಇಲಾಖೆಗೆ ಟಾಂಗ್ ಕೊಟ್ಟಿದ್ದರು. “ಸ್ಟೇಷನ್ ಮಾಸ್ಟರ್: ಯಾಕೆ ನಿಮ್ಮ ಟ್ರೇನು ಲೇಟಾಯ್ತು? ಲೊಕೊಪೈಲಟ್: ಬೆಂಗಳೂರು ಟ್ರಾಫಿಕ್ ಸರ್” ಎಂದು ಇನ್ನೊಬ್ಬರು ಜೋಕ್ ಮಾಡಿದ್ದಾರೆ.
ಇತ್ತೀಚೆಗೆ ಎಕ್ಸ್ ಬಳಕೆದಾರರೊಬ್ಬರು ಗೂಗಲ್ ಮ್ಯಾಪ್ಸ್‌ನ ಸ್ಕ್ರೀನ್‌ಶಾಟ್ ಒಂದನ್ನು ಶೇರ್ ಮಾಡಿಕೊಂಡಿದ್ದರು. ಅದರಲ್ಲಿ ಬ್ರಿಗೇಡ್ ಮೆಟ್ರೊಪೊಲಿಸ್‌ನಿಂದ ಕೆಆರ್ ಪುರಂ ರೈಲ್ವೇ ಸ್ಟೇಶನ್ ವರೆಗಿನ 6 ಕಿಲೋಮೀಟರ್ ದೂರವನ್ನು ಕ್ರಮಿಸುವುದಕ್ಕೆ ಅದು ತೋರಿಸುತ್ತಿದ್ದ ಸಮಯವನ್ನು ದಾಖಲಿಸಿತ್ತು. ಅದರಲ್ಲಿ ಡ್ರೈವಿಂಗ್ ಮೂಲಕ ಹೋದರೆ 44 ನಿಮಿಷ ಹಾಗೂ ವಾಕಿಂಗ್ ಮೂಲಕ ಹೋದರೆ 42 ನಿಮಿಷ ತೋರಿಸಿತ್ತು!
ಇದನ್ನೂ ಓದಿ: AI Traffic Signals: ಟ್ರಾಫಿಕ್ ಸಿಗ್ನಲ್ ಜಂಪ್ ಮಾಡುವವರ ಕಣ್ಗಾವಲಿಗೆ ಎಐ ತಂತ್ರಜ್ಞಾನ; ಪ್ರಮುಖ ಜಂಕ್ಷನ್‌ಗಳಲ್ಲಿಅಳವಡಿಕೆ