Monday, 16th September 2024

80 ವರ್ಷ ಮೇಲ್ಪಟ್ಟವರಿಗೆ, ವಿಶೇಷ ಚೇತನರಿಗೆ ಇಂದಿನಿಂದ ಮತದಾನ ಆರಂಭ

ಬೆಂಗಳೂರು: ಏಪ್ರಿಲ್ 29ರ ಶನಿವಾರದ ಇಂದಿನಿಂದ ವಿಧಾನಸಭಾ ಚುನಾವಣೆಗೆ ಮತದಾನ ಆರಂಭಗೊಳ್ಳಲಿದೆ.

80 ವರ್ಷ ಮೇಲ್ಪಟ್ಟವರಿಗೆ, ವಿಶೇಷ ಚೇತನರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ನೀಡಲಾಗಿದೆ. ಹೀಗಾಗಿ ಬ್ಯಾಲೆಟ್ ಪೇಪರ್ ವೋಟಿಂಗ್ ಪ್ರಕ್ರಿಯೆ ನಾಳೆಯಿಂದಲೇ ಆರಂಭ ಗೊಳ್ಳಲಿದೆ.

ಏಪ್ರಿಲ್ 29ರಿಂದ ಮೇ.6ರವರೆಗೆ 80 ವರ್ಷ ಮೇಲ್ಪಟ್ಟವರಿಗೆ, ಅಂಗವಿಕಲರು ಹಾಗೂ ವಿಕಲಚೇತನರಿಗೆ ಚುನಾವಣಾ ಸಿಬ್ಬಂದಿಗಳು ಬ್ಯಾಲೆಟ್ ಪೇಪರ್ ನೀಡುವ ಮೂಲಕ ಮತದಾನ ಪ್ರಕ್ರಿಯೆಯನ್ನು ನಡೆಸಲಿದ್ದಾರೆ ಎಂದಿದೆ.

ರಾಜ್ಯದಲ್ಲಿ 12.15 ಲಕ್ಷದಷ್ಟು 80 ವರ್ಷ ಮೇಲ್ಪಟ್ಟವರಿದ್ದಾರೆ. ಅವರಿಗೆಲ್ಲ ಇಂದಿನಿಂದ ಮನೆ ಮನೆಗೆ ತೆರಳಿ ಚುನಾವಣಾ ಸಿಬ್ಬಂದಿಗಳು ಬ್ಯಾಲೆಟ್ ಪೇಪರ್ ನೀಡಿ, ಮತದಾನ ಪ್ರಕ್ರಿಯೆಯನ್ನು ನಡೆಸಲಿದ್ದಾರೆ.

ಬೆಂಗಳೂರಿನಲ್ಲಿ 80 ವರ್ಷ ಮೇಲ್ಪಟ್ಟವರ ಸಂಖ್ಯೆ 2 ಲಕ್ಷಕ್ಕೂ ಹೆಚ್ಚು ಮಂದಿ ಇದ್ದಾರೆ. ಇವರಲ್ಲಿ 9,152 ಮಂದಿ ಮತದಾರರು ಮನೆಯಿಂದಲೇ ಬ್ಯಾಲೆಟ್ ಪೇಪರ್ ವೋಟಿಂಗ್ ಮಾಡಲಿದ್ದಾರೆ.

ಬ್ಯಾಲೆಟ್ ಪೇಪರ್ ವೋಟಿಂಗ್ ಅಂದರೆ ಏನು ?

ಇದೊಂದು ಗೌಪ್ಯ ಮತದಾನದ ವ್ಯವಸ್ಥೆಯಾಗಿದೆ. ಸ್ಥಳೀಯ ಪೊಲೀಸರು ಹಾಗೂ ಚುನಾವಣಾ ಸಿಬ್ಬಂದಿಗಳ ಸಮ್ಮುಖದಲ್ಲಿ ಹಿರಿಯ ನಾಗರೀಕರು, ಅಂಗವಿಕಲರಿಗೆ ಬ್ಯಾಲೆಟ್ ಪೇಪರ್ ನಲ್ಲಿ ಮತ ಚಲಾಯಿಸಲು ನೀಡಲಾಗುತ್ತದೆ.

ಚುನಾವಣಾ ಸಿಬ್ಬಂದಿ ನೀಡುವಂತ ಬ್ಯಾಲೆಟ್ ಪೇಪರ್ ನಲ್ಲಿ 80 ವರ್ಷ ಮೇಲ್ಪಟ್ಟವರು ಹಾಗೂ ವಿಶೇಷ ಚೇತನರು ತಮ್ಮ ಮತವನ್ನು ಗೌಪ್ಯವಾಗಿ ಚಲಾಯಿಸಿ, ಮತಪೆಟ್ಟಿಗೆಯಲ್ಲಿ ಹಾಕಲಿದ್ದಾರೆ. ಈ ಮತಪೆಟ್ಟಿಗೆಯನ್ನು ಮತದಾನದ ನಂತ್ರ ಸ್ಟ್ರಾಂಗ್ ರೂಮ್ ನಲ್ಲಿ ಇರಿಸಲಾಗುತ್ತದೆ. ಮೇ.13ರ ಮತಏಣಿಕೆಯಂದು, ಈ ಮತಗಳನ್ನು ಏಣಿಕೆ ಮಾಡಲಾಗುತ್ತದೆ.