Sunday, 15th December 2024

ಯೆಸ್ ಬ್ಯಾಂಕ್​ನ ಷೇರುಗಳು ಮನಬಂದ ಬೆಲೆಗೆ ಬಿಕರಿ

ಬೆಂಗಳೂರು: ಅಮೆರಿಕದ ಸಿಲಿಕಾನ್ ವ್ಯಾಲಿ ಬ್ಯಾಂಕ್ ಪತನಗೊಂಡ ಬೆನ್ನಲ್ಲೇ ಭಾರತದ ಷೇರುಪೇಟೆಯಲ್ಲಿ ಯೆಸ್ ಬ್ಯಾಂಕ್​ನ ಷೇರುಗಳು ಮನಬಂದ ಬೆಲೆಗೆ ಬಿಕರಿಯಾಗುತ್ತಿವೆ.

3 ವರ್ಷದ ಲಾಕ್–ಇನ್ ಅವಧಿ ಮುಗಿಯುತ್ತಿದ್ದಂತೆಯೇ ಎನ್​ಎಸ್​ಇ ಷೇರುಪೇಟೆಯಲ್ಲಿ ಯೆಸ್ ಬ್ಯಾಂಕ್​ನ 46 ಕೋಟಿ ಷೇರುಗಳ ವಹಿವಾಟುಗಳಾಗಿವೆ. ಕಳೆದ 6 ತಿಂಗಳಲ್ಲಿ ಸರಾಸರಿ ವಹಿವಾಟು ಆದ ಷೇರುಗಳ ಸಂಖ್ಯೆ 18.7 ಕೋಟಿ. ಅಂದರೆ ಒಂದೇ ದಿನದಲ್ಲಿ ಯೆಸ್ ಬ್ಯಾಂಕ್ ಷೇರು ಮೂರು ಪಟ್ಟು ಹೆಚ್ಚು ವಹಿವಾಟು ಕಂಡಿದೆ. ಮಂಗಳವಾರ ಅದರ ಷೇರಿಗೆ ತುಸು ಜೀವ ಬಂದಿದ್ದು, 15.70 ರುಪಾಯಿಗೆ ವಹಿವಾಟು ಕಾಣುತ್ತಿದೆ.

ಯೆಸ್ ಬ್ಯಾಂಕ್​ನಲ್ಲಿ ಕೆಟ್ಟ ಸಾಲ ಬಹಳ ಹೆಚ್ಚಿದ್ದು, ಅದರ ಕಾರ್ಯನಿರ್ವಹಣೆಯೇ ಕಷ್ಟಸಾಧ್ಯ ಎಂಬಂತಹ ಪರಿಸ್ಥಿತಿ ಇರುವುದು ಆರ್​ಬಿಐನ ಗಮನಕ್ಕೆ ಬಂದಿತ್ತು. ಯೆಸ್ ಬ್ಯಾಂಕ್ ಯಾವಾಗ ಬೇಕಾದರೂ ಕುಸಿದುಬೀಳುವ ಹಂತದಲ್ಲಿತ್ತು. ಸಾಮಾನ್ಯ ಗ್ರಾಹಕರ ಠೇವಣಿಗಳನ್ನು ಉಳಿಸುವ ದೃಷ್ಟಿಯಿಂದ ಆರ್​ಬಿಐ ಯೆಸ್ ಬ್ಯಾಂಕ್​ಗೆ ಪುನಶ್ಚೇತನ ಕೊಡಲು ಮರುರಚನೆ ಯೋಜನೆ ಹಾಕಿತು. ಅದರಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವ ದಲ್ಲಿ ಇತರ 9 ಬ್ಯಾಂಕುಗಳು ಯೆಸ್ ಬ್ಯಾಂಕ್​ಗೆ ಬಂಡವಾಳ ಹಾಕಿ ಅದರ ಕಾರ್ಯನಿರ್ವಹಣೆಗೆ ಅನುವು ಮಾಡಿ ಕೊಡಬೇಕೆಂದು ನಿರ್ಧರಿಸಲಾಯಿತು.

10 ರುಪಾಯಿಯಂತೆ ಯೆಸ್ ಬ್ಯಾಂಕ್​ನ ಷೇರುಗಳು ಮಾರಾಟವಾದವು. 2020ರಲ್ಲಿ 3 ವರ್ಷಗಳ ಲಾಕ್–ಇನ್ ಪೀರಿಯಡ್ ಎಂದು ಘೋಷಿಸಲಾಯಿತು. ಮಾರ್ಚ್ 13ಕ್ಕೆ ಲಾಕ್–ಇನ್ ಅವಧಿ ಮುಕ್ತಾಯಗೊಂಡಿದೆ. ಹೀಗಾಗಿ, ಯೆಸ್ ಬ್ಯಾಂಕ್ ಷೇರು ಮಾರಾಟಕ್ಕೆ ನೂಕು ನುಗ್ಗುಲು ಆಗುತ್ತಿದೆ.