Thursday, 12th December 2024

ತಾಲ್ಲೂಕನ್ನು ಪ್ರವೇಶಿಸಿದ ಭಾರತ್‌ ಜೋಡೋ ಪಾದಯಾತ್ರೆ

ಚಿಕ್ಕನಾಯಕನಹಳ್ಳಿ: ತುರುವೇಕೆರೆ ವಿಧಾನಸಭಾ ಕ್ಷೇತ್ರದ ಬಾಣಸಂದ್ರ ಗ್ರಾಮದಿಂದ ಸಾಗಿ ಬಂದ ಕಾಂಗ್ರೆಸ್ ಪಕ್ಷದ ಭಾರತ್‌ ಜೋಡೋ ಪಾದಯಾತ್ರೆ ಭಾನುವಾರ ಬೆಳಗ್ಗೆ ತಾಲ್ಲೂಕನ್ನು ಪ್ರವೇಶಿಸಿತು.

ಬೆ.೬ ಗಂಟೆಗೆ ತಿಪಟೂರು ವಿಧಾನಸಭಾ ಕ್ಷೇತ್ರದ ಕೆ.ಬಿ.ಕ್ರಾಸ್‌ ನಿಂದ ಆರಂಭವಾದ ೮ ನೇ ದಿನದ ಪಾದಯಾತ್ರೆಗೆ ರಾಹುಲ್ ಗಾಂಧಿ ಅವರೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಮಾಜಿ ಉಪ ಮುಖ್ಯ ಮಂತ್ರಿ ಪರಮೇಶ್ವರ್ ಸಾಥ್ ನೀಡಿದರು.

ಕಾನೂನು ಸಚಿವ ಜೆಸಿಎಂರವರ ತವರು ಜೆ.ಸಿ.ಪುರದಲ್ಲಿ ಯಾತ್ರೆಗೆ ಅದ್ದೂರಿ ಸ್ವಾಗತ ದೊರೆಯಿತು. ಬೆಳಗ್ಗೆ ೯.೩೦ ರ ವೇಳೆಗೆ ಪಟ್ಟಣಕ್ಕೆ ಆಗಮಿಸಿದ ಯಾತ್ರೆಯು ನೆಹರು ವೃತ್ತದಲ್ಲಿ ಮಹರ್ಷಿ ಶ್ರೀವಾಲ್ಮೀಕಿ ಅವರ ಭಾವಚಿತ್ರಕ್ಕೆ ರಾಹುಲ್ ಗಾಂಧಿ ಪುಷ್ಪಾರ್ಚನೆ ಮಾಡಿದರು. ನಂತರ ಕನಕ ಭವನಕ್ಕೆ ತೆರಳಿದ ಬಿ.ಕೆ ಹರಿಪ್ರಸಾದ್, ಪರಮೇಶ್ವರ್ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾನಮನ ಸಲ್ಲಿಸಿ ತರಬೇನಹಳ್ಳಿ ಸಮೀಪ ವಿಶ್ರಾಂತಿಗೆ ತೆರಳಿದರು.

ಯಾತ್ರೆಯಲ್ಲಿ ರಾಹುಲ್ ಗಾಂಧಿ ನೋಡಲು ಸಾಕಷ್ಟು ಜನರು ನರೆದಿದ್ದರು. ಈ ವೇಳೆ ಜನರನ್ನು ನೋಡಿದ ರಾಹುಲ್ ಅವರತ್ತ ಕೈ ಬೀಸಿದರು. ಅಲ್ಲದೆ ರಸ್ತೆ ಬದಿಯಲ್ಲಿ ನಿಂತಿದ್ದ ಅನೇಕರೊಂದಿಗೆ ಪೊಟೊ ಕ್ಲಿಕ್ಕಿಸಿಕೊಂಡರು. ಪ್ರಗತಿಪರ ರೈತ ಅಣೇಕಟ್ಟೆ ವಿಶ್ವನಾಥ್ ಅವರೊಂದಿಗೆ ಸ್ವಲ್ಪ ದೂರ ಹೆಜ್ಜೆ ಹಾಕುತ್ತಾ ರಾಹುಲ್ ಮಾತನಾಡಿದರು.

ಮೊಳಗಿದ ಮುಖ್ಯಮಂತ್ರಿ ಘೋಷಣೆ: ಸಿದ್ದರಾಮಯ್ಯನವರು ಶ್ರೀ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪಾ ನಮನ ಸಲ್ಲಿಸಲು ಆಗಮಿಸಿದಾಗ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಕಾರ್ಯಕರ್ತರು ಜೈಕಾರ ಹಾಕಿದರು. ಅನ್ನರಾಮಯ್ಯ, ಬಡವರ ಬಂಧು, ಎಂದು ಘೋಷಣೆ ಕೂಗಿದರು.

ಮಗುವೊಂದಿಗೆ ಸೆಲ್ಪಿ ಪಡೆದ ಭಾವಿ ಪ್ರಧಾನಿ !
ಯಾತ್ರೆ ಮಧ್ಯೆ ಕಾರಿನಲ್ಲಿ ಮಗುವೊಂದನ್ನು ತನ್ನ ತೊಡೆಯ ಮೇಲೆ ಕುಳ್ಳಿರಿಸಿಕೊಂಡು ರಾಹುಲ್ ಮಗುವಿನ ಜೊತೆ ಪೊಟೊ ಕ್ಲಿಕ್ಕಿಸಿಕೊಂಡರು. ಮಹಿಳೆಯೊಬ್ಬರು ತಮ್ಮ ಮಗು ಎತ್ತಿಕೊಂಡು ಪೋಟೋಗಾಗಿ ನಿಂತಿದ್ದರು. ಈ ಸಮಯದಲ್ಲಿ ರಾಹುಲ್ ಯಾವುದೇ ಬಿಂಕವನ್ನು ತೋರದೆ ಪೋಸ್ ನೀಡಿದರು.

ಆರ್‌ಎಸ್‌ಎಸ್ ರಾಜು ಕೊಲೆಗೆ ಕಾಂಗ್ರೆಸ್ ಕಾರಣ
ಪಿಎಫ್‌ಐ, ಎಸ್‌ಡಿಪಿಐ ಸಂಘಟನೆಗಳ ಮೇಲೆ ಅತಿಯಾದ ಪ್ರೀತಿ ತೋರಿದ ಕಾಂಗ್ರೆಸ್ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನೀವೇ ನನ್ನ ಕೊಲೆಗೆ ಕಾರಣ ಎಂದು ಆರ್‌ಎಸ್‌ಎಸ್ ಕಾರ್ಯಕರ್ತ ರಾಜು ಅವರ ಭಾವಚಿತ್ರ ಹೊಂದಿರುವ ಭಿತ್ತಿಪತ್ರವನ್ನು ಅಂಟಿಸಲಾಗಿತ್ತು.

ಸಂಜೆ ನಾಲ್ಕು ಗಂಟೆಗೆ ಭೋಜನ ವಿರಾಮದ ಬಳಿಕ ಯಾತ್ರೆ ಪುನಾರಂಭವಾಯಿತು. ರಾತ್ರಿ ಸುಮಾರು ೭ ಗಂಟೆಗೆ ಅಂಕನ ಬಾವಿ ತಲುಪಲಿರುವ ಯಾತ್ರೆಯು ಟೀ ಬ್ರೇಕ್ ಮುಗಿದ ಬಳಿಕ ಪೋಚ್‌ಕಟ್ಟೆ ಬಳಿಯ ಪೆಟ್ರೋಲ್‌ಬಂಕ್ ಬಳಿ ವಾಸ್ತವ್ಯ ಮಾಡಲಿದೆ. ಈ ವೇಳೆಗೆ ಒಟ್ಟು ೩೩ ಕಿ.ಮೀ.ವರೆಗೆ ರಾಹುಲ್‌ಗಾಂಧಿ ಹೆಜ್ಜೆ ಹಾಕಲಿದ್ದಾರೆ.