ಬೆಂಗಳೂರು: ಇದೇ 16ರ ಭಾನುವಾರದಂದು ಭರತ ನಾಟ್ಯ, ಕೂಚಿಪುಡಿ, ಕಥಕ್, ನೃತ್ಯದಲ್ಲಿ ಪ್ರಾವೀಣ್ಯತೆ ಹೊಂದಿರುವ ಬಾಲಕ ಜೆ.ಮನು ಅವರ ಕೂಚಿಪುಡಿ ತೊಲಿ ವಿನಿಕಿ ರಂಗಪ್ರವೇಶ ಕಾರ್ಯಕ್ರಮ ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ನಡೆಯಲಿದೆ.
ಶ್ರೀಮತಿ ರೇಖಾ, ಜಗದೀಶ್ ಪುತ್ರರಾಗಿರುವ ಜೆ.ಮನು ಖ್ಯಾತ ನೃತ್ಯ ಕಲಾವಿದೆ ವೀಣಾ ಮೂರ್ತಿ ಅವರ ಗುರು ಮಾರ್ಗದರ್ಶನದಲ್ಲಿ ಎರಡು ವರ್ಷದ ಕೂಚಿಪುಡಿ ಡಿಪ್ಲೋಮಾ ಪದವಿ ಪೂರೈಸಿದ್ದು. ಇವರ ಕೂಚಿಪುಡಿ ನೃತ್ಯ ರಂಗಪ್ರವೇಶ ರಾಜರಾಜೇಶ್ವರಿ ಕಲಾನೀಕೇತನ ಆಶ್ರಯದಲ್ಲಿ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ಸಿದ್ದೇಂದ್ರ ಯೋಗಿ ಕುಚುಪುಡಿ ಕಲಾಪಾರ್ಥಂ ಸದಸ್ಯ ಡಾ.ವೇದನಾಥನ್ ರಾಮಲಿಂಗಾ ಶಾಸ್ತ್ರೀ,ಕೂಚಿಪುಡಿ ನೃತ್ಯಗಾರ ವೆಂಕಟ ನಾಗ ಚಲಪತಿ, ಸಂಗೀತ ಕಲಾ ರತ್ನ ಡಾ.ಎಂ. ಸೂರ್ಯ ಪ್ರವೀಣ್, ಭರತ ನಾಟ್ಯ ಕಲಾವಿದ ಪ್ರವೀಣ್ ಕುಮಾರ್ ಭಾಗವಹಿಸಲಿದ್ದಾರೆ.
2015ರಲ್ಲಿ ಒಂಬತ್ತನೇ ವಯಸ್ಸಿನಲ್ಲಿ ಭರತ ನಾಟ್ಯ ರಂಗಪ್ರವೇಶ ಪಡೆದ ಮನು, 2018ರಲ್ಲಿ ಕಥಕ್ ನೃತ್ಯದಲ್ಲಿ ರಂಗಪ್ರವೇಶ ಮಾಡಿದರು.ಈ ಮೂರು ನೃತ್ಯಗಳಲ್ಲಿ ಪ್ರಾವೀಣ್ಯತೆಯನ್ನು ಹೊಂದಿರುವ ಜೆ.ಮನು ಕೇವಲ ಮೂರು ವರ್ಷದಲ್ಲಿ ನೂರಕ್ಕೂ ಅಧಿಕ ಷೋ ಗಳನ್ನು ನೀಡಿ ಕಲಾರಸಿಕರ ಮನಗೆದ್ದಿದ್ದಾರೆ. ಕೇವಲ ಭಾರತವಲ್ಲದೇ ಮಲೇಷಿಯಾ, ಶ್ರೀಲಂಕಾ, ಯುಎಇ, ಚೀನಾ ಮತ್ತು ಇತರ ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ತಮ್ಮ ಪ್ರದರ್ಶನ ನೀಡಿದ್ದಾರೆ.
ಸದ್ಯ ಚೈತನ್ಯ ಕಾಲೇಜಿನಲ್ಲಿ ಪಿಯು ವ್ಯಾಸಂಗ ಮುಗಿಸಿರುವ ಜೆ.ಮನು ಇಂಜಿನಿಯರಿಂಗ್ ಪದವಿಗೆ ನಿರೀಕ್ಷೆಯಲ್ಲಿದ್ದಾರೆ.