Sunday, 24th November 2024

ಅನ್ಯಾಯವನ್ನು ಸಮರ್ಥನೆ ಮಾಡಿಕೊಂಡು ಪಕ್ಷ ರಾಜಕಾರಣಕ್ಕಾಗಿ ಬಿಜೆಪಿ ಕನ್ನಡಿಗರಿಗೆ ದ್ರೋಹ ಮಾಡುತ್ತಿದೆ

ಹಾಸನ: ಬಿಜೆಪಿಯವರು ಕೇಂದ್ರ ಸರ್ಕಾರದ ಅನ್ಯಾಯವನ್ನು ಸಮರ್ಥನೆ ಮಾಡಿಕೊಂಡು ಪಕ್ಷ ರಾಜಕಾರಣಕ್ಕಾಗಿ ಕನ್ನಡಿಗರಿಗೆ ದ್ರೋಹ ಮಾಡು ತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ಕಾರ್ಯಕ್ರಮಕ್ಕೆ ತೆರಳುವ ಮುನ್ನ ಮಾಧ್ಯಮದರೊಂದಿಗೆ ಮಾತನಾಡಿದರು.

ಕೇಂದ್ರ ಸರ್ಕಾರದ ತೆರಿಗೆ ಹಂಚಿಕೆಯಲ್ಲಿ ಆಂಧ್ರ ಪ್ರದೇಶ, ತಮಿಳುನಾಡಿಗೆ ತೊಂದರೆ ಇಲ್ಲ. ನಮ್ಮ ಸರ್ಕಾರಕ್ಕೆ ಮಾತ್ರ ಯಾಕೆ ತೊಂದರೆ, ಅಪಪ್ರಚಾರ ಮಾಡುತ್ತಿದ್ದಾರೆ ಎಂಬ ಬಿಜೆಪಿ ಆರೋಪಕ್ಕೆ ಉತ್ತರಿಸಿ ಕೇರಳದವರು ಯಾಕೆ ದೆಹಲಿಗೆ ಬಂದು ಪ್ರತಿಭಟಿಸಿದರು ಅದಕ್ಕೆ ತಮಿಳುನಾಡಿನವರು ಏಕೆ ಬೆಂಬಲ ನೀಡಿದರು ಎಂದು ಪ್ರಶ್ನಿಸಿ ಎಲ್ಲಾ ರಾಜ್ಯಗಳಿಗೂ ಅನ್ಯಾಯವಾಗಿದೆ. ದಕ್ಷಿಣ ರಾಜ್ಯಗಳಿಗೆ ಜಾಸ್ತಿ ಅನ್ಯಾಯವಾಗಿದೆ. ಉತ್ತರದ ರಾಜ್ಯಗಳಿಗೆ ಕೊಡಬೇಡಿ ಎನ್ನುವುದಿಲ್ಲ. ಆದರೆ ನಮಗೆ ಅನ್ಯಾಯ ಮಾಡಬೇಡಿ. ಕೇಂದ್ರದ ಪಾಲಿನಲ್ಲಿಯೇ ಕೊಡಲಿ. ನಮ್ಮ ಪಾಲಿನಿಂದ ಯಾಕೆ ಕಿತ್ತುಕೊಡುತ್ತಾರೆ ಎಂದರು. 100 ರೂ ತೆರಿಗೆ ಸಂಗ್ರಹ ಮಾಡಿ ಕೊಟ್ಟರೆ 13 ರೂ. ಮಾತ್ರ ಕೊಡುತ್ತಾರೆ ಇದು ನ್ಯಾಯವೇ? ಎಂದರು.

ಉದ್ದೇಶಪೂರ್ವಕವಾಗಿ ಅಪಪ್ರಚಾರ: ವಿಧಾನ ಪರಿಷತ್ ನಲ್ಲಿ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ (ತಿದ್ದು ಪಡಿ) ಮಸೂದೆಗೆ ಸೋಲುಂಟಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಅವರು ಉದ್ದೇಶಪೂರ್ವಕವಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಆದಾಯ ಹೆಚ್ಚಿರುವ ದೇವಸ್ಥಾನಗಳಿಂದ ಕಡಿಮೆ ಆದಾಯವಿರುವ ಹಿಂದೂ ದೇವಾಲಯಗಳಿಗೆ ಬಳಸುವುದನ್ನು ವಿರೋಧಿಸುತ್ತಾರೆ. ಬೇರೆ ಯಾವ ಧರ್ಮದ ದೇವಾಲಯ ಗಳಿಗೂ ಇದನ್ನು ಬಳಸುವುದಿಲ್ಲ. ಅವರಿಗೆ ಪರಿಷತ್ತಿನಲ್ಲಿ ಬಹುಮತ ಇದೆ ಎಂದು ಹೀಗೆ ಮಾಡಿದ್ದಾರೆ ಎಂದರು.

ಹಿಂದೂಗಳ ಹಣವನ್ನು ಲೂಟಿ ಮಾಡಲು ಸರ್ಕಾರ ಹೊರಟಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟೀಕೆಗೆ ಪ್ರತಿಕ್ರಿಯೆ ನೀಡಿ ಅವರು ಲೂಟಿ ಮಾಡುತ್ತಿದ್ದರೆಂದೇ ರಾಜ್ಯದ ಜನ ಅವರನ್ನು ತಿರಸ್ಕಾರ ಮಾಡಿರುವುದು ಎಂದರು.

ಮಾನಹಾನಿಯಾಗುವುದಿಲ್ಲ: ಕಳೆದ ಬಾರಿ ಬಿಜೆಪಿ ಸರ್ಕಾರದ ವಿರುದ್ಧ 40% ಸರ್ಕಾರ ಎಂದು ಜಾಹೀರಾತು ನೀಡಿದ್ದಾರೆ ಎಂಬ ಬಗ್ಗೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರ ವಿರುದ್ಧ ಮಾನನಷ್ಟ ಮೊಕದ್ದಮೆಯ ವಿಶೇಷ ಕ್ರಿಮಿನಲ್ ಪ್ರಕರಣ ದಾಖಲು ಮಾಡಲು ಜನಪ್ರತಿನಿಧಿ ನ್ಯಾಯಾಲಯ ಆದೇಶ ಮಾಡಿರುವ ಬಗ್ಗೆ ಉತ್ತರಿಸಿ ನಮ್ಮ ವಕೀಲರನ್ನು ನೇಮಿಸುತ್ತೇವೆ. ಅವರು ಸರಿಯಾದ ಉತ್ತರ ನೀಡುತ್ತಾರೆ ಎಂದರು. ಪ್ರಜಾಪ್ರಭುತ್ವ ದಲ್ಲಿ ಪ್ರತಿಭಟನೆ ಮಾಡಿದರೆ ಅಥವಾ ಪ್ರತಿಭಟನಾ ಜಾಹೀರಾತು ನೀಡಿದರೆ ಅದು ಎಂದರು.

ಅನಂತ ಕುಮಾರ್ ಹೆಗಡೆ ಲೋಕಸಭಾ ಸದಸ್ಯರಾಗಲು ಲಾಯಕ್ಕೇ
ಸಂಸದ ಅನಂತ ಕುಮಾರ್ ಹೆಗಡೆಯವರು ಇಂಥ ದರಿದ್ರ ಸರ್ಕಾರ ಎಂದೂ ನೋಡಿಲ್ಲ ಸರ್ಕಾರಿ ನೌಕರರಿಗೆ ಸಂಬಳ ನೀಡಲು ಹಣವಿಲ್ಲ. ರಾಜ್ಯವನ್ನು ಲೂಟಿ ಮಾಡಿ ಚುನಾವಣೆ ನಡೆಸಲು ಹೊರಟಿದ್ದಾರೆ ಎಂದಿರುವ ಬಗ್ಗೆ ಮಾತನಾಡಿ ಯಾರಾದರೂ ವೇತನ ನೀಡಿಲ್ಲ ಎಂದು ಹೇಳಿದ್ದಾರೆಯೇ ? ಎಂದು ಪ್ರಶ್ನಿಸಿದರು. ಅನಂತ ಕುಮಾರ ಹೆಗಡೆ ನಾವು ಅಧಿಕಾರಕ್ಕೆ ಬಂದಿರುವುದೇ ಈ ಸಂವಿಧಾನ ಬದಲಾಯಿಸಲು ಎಂದವರು. ಅವರು ಲೋಕಸಭಾ ಸದಸ್ಯರಾಗಲು ಲಾಯಕ್ಕೇ? ಎಂದು ಪ್ರಶ್ನಿಸಿದರು. ಅಂಥವರು ಹೇಳಿಕೆ ನೀಡಿದರೆ ಯಾವ ಕಿಮ್ಮತ್ತು ಇರುತ್ತದೆ ಎಂದರು. ಅಮೆರಿಕದ ಅಧ್ಯಕ್ಷ ಅಬ್ರಹಾಂ ಲಿಂಕನ್ ಸಂಸತ್ತು ಮತ್ತು ನ್ಯಾಯಾಲಯಗಳಿಗೆ ಜನರೇ ಮಾಲೀಕರು. ಸಂವಿಧಾನ ಕಿತ್ತೊಗೆಯಿರಿ ಎನ್ನುವವರನ್ನೇ ಕಿತ್ತೊಗೆಯಿರಿ ಎಂದು ಹೇಳಿದ್ದರು ಎಂದರು. ಸಂವಿಧಾನದ ಬಗ್ಗೆ ಗೌರವ ಇಲ್ಲದವರು ಲೋಕಸಭಾ ಸದಸ್ಯ ರಾಗಲು ಲಾಯಕ್ಕೇ ಎಂದರು.

ಅಲ್ಪಸಂಖ್ಯಾತರ ವಿರೋಧಿ
ಕಾಮಾಲೆ ರೋಗದವರಿಗೆ ಕಾಣೋದೆಲ್ಲಾ ಹಳದಿ. ಮಾತನಾಡುವುದು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎನ್ನುತ್ತಾರೆ ಆದರೆ ಮುಸಲ್ಮಾನರನ್ನು ವಿರೋಧಿಸುತ್ತಾರೆ. ನನ್ನನ್ನು ಏಕೆ ಸಿದ್ರಾಮುಲ್ಲಾ ಖಾನ್ ಎನ್ನುತ್ತಾರೆ ಎಂದರೆ ಅವರು ಅಲ್ಪಸಂಖ್ಯಾತರ ಧರ್ಮಕ್ಕೆ ವಿರುದ್ಧವಾಗಿರುವವರು. ಅದಕ್ಕೆ ಹಾಗೆ ಕರೆಯುತ್ತಾರೆ ಎಂದರು.