Thursday, 12th December 2024

ಸಿದ್ದರಾಮಯ್ಯ ಸರ್ಕಾರಿ ನೌಕರರ ಮೂಗಿಗೆ ತುಪ್ಪ ಸವರಿದ್ದಾರೆ: ಬಸವರಾಜ ಬೊಮ್ಮಾಯಿ

7ನೇ ವೇತನ ಆಯೋಗದ ಶಿಫಾರಸ್ಸು ಈಡೇರಿಸುವ ಕರ್ತವ್ಯ ಸಿದ್ದರಾಮಯ್ಯ ಅವರದ್ದು:ಬಸವರಾಜ ಬೊಮ್ಮಾಯಿ

ಕಲಬುರ್ಗಿ: 7ನೇ ವೇತನ ಆಯೋಗದ ಅಂತಿಮ ಶಿಫಾರಸು ಈಡೇಸುವ ಕರ್ತವ್ಯ ಮುಖ್ಯಮಂತ್ರಿ ಸಿದ್ದರಾಮಯ್ಯರದ್ದು ಇದೆ. ಆದರೆ, ಬಜೆಟ್ ನಲ್ಲಿ ಒಂದು ನಯಾಪೈಸೆ ಕೊಟ್ಟಿಲ್ಲ. ಸರ್ಕಾರಿ ನೌಕರರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಕಲಬುರ್ಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಏಳನೆ ವೇತನ ಆಯೋಗದ ವರದಿ ಜಾರಿ ಮಾಡಬೇಕು. ಚುನಾವಣೆ ಪೂರ್ವದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಸಿಎಂ ಸಿದ್ದರಾಮಯ್ಯ ಬಹಳಷ್ಟು ಭಾಷಣ ಮಾಡುತ್ತಿದ್ದರು. ಈಗ ಅವರು ಅಧಿಕಾರದಲ್ಲಿದ್ದಾರೆ. ನಾವು ಶೇ.17ರಷ್ಟು ಮಧ್ಯಂತರ ಪರಿಹಾರ ಕೊಟ್ಟಿದ್ದೇವು ಎಂದು ಹೇಳಿದರು.

ಸಿದ್ದರಾಮಯ್ಯನವರಿಗೆ ಮಾರ್ಚ್ ಏಪ್ರಿಲ್ ನಲ್ಲಿ 7ನೇ ವೇತನ ಆಯೋಗದ ವರದಿ ಬರುತ್ತದೆ ಅಂತ ಗೊತ್ತಿದ್ದರೂ ಕೂಡಾ ಬಜೆಟ್ ನಲ್ಲಿ ಯಾವುದೇ ಹಣ ಮೀಸಲಿಡದೇ. ಸರ್ಕಾರಿ ನೌಕರರಿಗೆ ಮೂಗಿಗೆ ತುಪ್ಪ ಒರಿಸುವ ಕೆಲ್ಸ ಮಾಡಿದ್ದಾರೆ. ವರದಿ ಜಾರಿ ಆಗುತ್ತದೆಯೋ ಇಲ್ಲವೋ ಕಾದು ನೋಡಬೇಕು.. 7ನೇ ವೇತನ ಆಯೋಗದ ವರದಿ ರೆಡಿಯಾಗಿತ್ತು, ಆದರೂ ಆರು ತಿಂಗಳು ಕಾಲಾವಕಾಶ ನೀಡಿದರು. ಈಗ ನೀತಿ ಸಂಹಿತೆ ಜಾರಿ ಆಗುತ್ತಿದೆ. ಆಮೇಲೆ ಮಾಡೋಣ ಅಂತ ಹೇಳುವುದು ಗೊತ್ತಿರುವ ವಿಚಾರ ಎಂದು ಹೇಳಿದರು.

ಇದೇ ವೇಳೆ, ಶಿವಮೊಗ್ಗ ಬಂಡಾಯ ಅಭ್ಯರ್ಥಿಯಾಗಿ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಸ್ಪರ್ಧೆ ಮಾಡುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಪಕ್ಷದ ನಾಯಕರು ಈಶ್ವರಪ್ಪ ಅವರ ಜೊತೆ ಮಾತನಾಡುತ್ತಾರೆ. ಅವರ ಎದೆ ಬಗಿದರೆ ಮೋದಿ ಕಾಣುತ್ತಾರೆ ಅಂತ ಹೇಳಿದ್ದಾರೆ ಹಾಗಾಗಿ ಮೋದಿ ಮೇಲೆ ಅವರಿಗೆ ಭಕ್ತಿ ಇದೆ, ಈಶ್ವರಪ್ಪರನ್ನು ಮತ್ತೆ ಪಕ್ಷದ ನೇತೃತ್ವ ವಹಿಸಲು ಸಹಾಯ ಆಗುತ್ತದೆ ಎಂಬ ವಿಶ್ವಾಸವಿದೆ,ಮಾತುಕತೆಯ ಮೂಲಕ ಎಲ್ಲವೂ ಬಗೆಹರಿಯುತ್ತವೆ ಎಂದು ಹೇಳಿದರು.

ಮಂಡ್ಯದಿಂದ ನಿಖಿಲ್ ಸ್ಪರ್ಧೆ ಮಾಡುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಿಖಿಲ್ ಸ್ಪರ್ಧೆ ಬಗ್ಗೆ ನಮ್ಮ ವರಿಷ್ಠರು ಹಾಗೂ ಜೆಡಿಎಸ್ ನಾಯಕರು ಚರ್ಚೆ ಮಾಡುತ್ತಾರೆ.

ಇನ್ನೂ ಯಾವುದು ಅಂತಿಮಗೊಂಡಿಲ್ಲ, ಕುಮಾರಸ್ವಾಮಿ ಅವರು ದೆಹಲಿಗೆ ಹೋಗಿದ್ದಾರೆ, ಅವರು ವರಿಷ್ಠರ ಜೊತೆ ಚರ್ಚಿಸಿ ಅಂತಿಮವಾಗುತ್ತದೆ ಎಂದರು.

ಎಲ್ಲಾ ಕ್ಷೇತ್ರದ ರಿಪೋರ್ಟ್ ಗಳು ವರಿಷ್ಠರ ಬಳಿ ಇದೆ, ಯಾರಿಗೆ ಟಿಕೆಟ್ ಕೊಟ್ಟರೆ ಗೆಲುವು ಸಿಗುತ್ತದೆ ಎನ್ನುವ ಸೋಷಿಯಲ್ ಕಾಂಬಿನೇಷನ್ ವರಿಷ್ಠರ ಬಳಿ ಆಗಿದೆ. ಈಗಾಗಲೇ ನಾವು ಏನು ಹೇಳಬೇಕು ಪಾರ್ಲಿಮೆಂಟರಿ ಬೋರ್ಡ್ ನಲ್ಲಿ ಎಲ್ಲವೂ ಹೇಳಿ ಆಗಿದೆ. ಅಂತಿಮ ನಿರ್ಧಾರ ನಮ್ಮ ರಾಷ್ಟ್ರೀಯ ಅಧ್ಯಕ್ಷರು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರು ಚರ್ಚಿಸಿದ್ದಾರೆ. ಟಿಕೆಟ್ ಹಂಚಿಕೆ ಅದು ಅವರ ಹಂತದಲ್ಲಿದೆ. ಆದಷ್ಟು ಬೇಗನೇ ಎರಡನೇ ಪಟ್ಟಿ ಬಿಡಿಗಡೆ ಆಗಲಿದೆ ಎಂದು ಹೇಳಿದರು.